ತಾಯ್ತನಕ್ಕೆ ಕಾದು ಕುಳಿತಾಗ ಮಾಡಬಹುದಾದ ಕೆಲಸಗಳು

ತಾಯ್ತನ ಬಯಸಿದಾಗ ಎಲ್ಲರಿಗೂ ಧಕ್ಕುವುದಿಲ್ಲ. ಅದೆಷ್ಟೋ ಮಹಿಳೆಯರು ವರ್ಷಾನುಗಟ್ಟಲೆ ಕಾದು ಕುಳಿತಿರುತ್ತಾರೆ. ಕಾಯುವಾಗ ಅನೇಕ ಮಹಿಳೆಯರು ಒತ್ತಡಕ್ಕೆ ಒಳಗಾಗುತ್ತಾರೆ. ಇನ್ನೂ ಸಿಹಿ ಸುದ್ದಿ ಕೊಡುವ ಸಮಯ ಬಂದಿಲ್ಲವೇ ಎಂದು ನೊಂದಿರುತ್ತಾರೆ. ಸ್ನೇಹಿತರ ಬಳಿ, ನೆಂಟರಿಷ್ಟರೊಂದಿಗೆ ಹೇಳಿಕೊಂಡು ಪರಿತಪಿಸುತ್ತಿರುತ್ತಾರೆ. ಇನ್ನು ಹತ್ತಿರದವರು ಪ್ರತಿ ತಿಂಗಳು ಪ್ರಶ್ನೆ ಮಾಡಲು ಹಿಂಜರಿಯುವುದಿಲ್ಲ. 

ಸ್ನೇಹ ಮದುವೆಯಾಗಿ ಒಂದು ವರ್ಷವಾಗಿರಬೇಕಷ್ಟೇ, ಮನೆಯಲ್ಲೆಲ್ಲ ಮಗುವಿನ ಬಗ್ಗೆ ಪ್ರಶ್ನಿಸತೊಡಗಿದರು. ನಿಜ ಹೇಳಬೇಕೆಂದರೆ ಅವಳೂ ತಾಯ್ತನದ ನಿರೀಕ್ಷೆಯಲ್ಲಿದ್ದಳು. ಆದರೆ, ನಾವು ಪ್ರಯತ್ನಿಸುತ್ತಿದ್ದೇವೆ, ಪ್ರಯತ್ನ ಕೈಗೂಡುತ್ತಿಲ್ಲ ಎಂದು ಬಾಯಿಬಿಟ್ಟು ಹೇಳುವಂತಿಲ್ಲ. ಎಲ್ಲರಿಂದ ಪ್ರಶ್ನೆಗಳನ್ನು ಮಾತ್ರ ಎದುರಿಸುತ್ತಲೇ ಇದ್ದಳು. ಇದರಿಂದ ಸ್ನೇಹ ಒತ್ತಡಕ್ಕೊಳಗಾದಳು. ಹೀಗೆ ಎರಡು ವರ್ಷ ಕಳೆದೇ ಹೋಯಿತು. ತನ್ನಲ್ಲೇನೋ ಸಮಸ್ಯೆ ಇದೆ ಎಂದು ವೈದ್ಯರತ್ತ ಓಡಿದಳು. ಎಲ್ಲ ಪರೀಕ್ಷಿಸಿದವರು ನಿನಗೇನೂ ಸಮಸ್ಯೆ ಇಲ್ಲ, ಮನದಲ್ಲಿರುವ ಒತ್ತಡ ಕಡಿಮೆ ಮಾಡಿಕೊಳ್ಳಿ ಎಂದು ಸಲಹೆ ನೀಡಿ ವೈದ್ಯರು ಮನೆಗೆ ಕಳುಹಿಸಿದರು. ಅದಕ್ಕೆಂದೇ ಸಂಗೀತ ಕಲಿಯತೊಡಗಿದಳು. ಅಷ್ಟಾಗಿ ಆರು ತಿಂಗಳಲ್ಲೇ ಸ್ನೇಹ ಸಿಹಿ ಸುದ್ದಿ ನೀಡಿದಳು. ಆರಂಭಿಸಿದ ಹವ್ಯಾಸವನ್ನು ಸ್ನೇಹ ಇಂದಿಗೂ ಮುಂದುವರಿಸಿಕೊಂಡು ಬಂದಿದ್ದಾಳೆ. ದೇಹದಲ್ಲಿರುವ ಸಮಸ್ಯೆಗಳಿಗಿಂತ ಮನಸ್ಸಿನಲ್ಲಿರುವ ಸಮಸ್ಯೆಗಳೇ ಹೆಚ್ಚು ಎಂಬುದು ಸ್ನೇಹಳ ಅಭಿಪ್ರಾಯ. 

ನಮ್ಮ ಮಧ್ಯದಲ್ಲೇ ಸ್ನೇಹಳಂತೆ ಅದೆಷ್ಟು ಮಂದಿಯಿಲ್ಲ. ಕೇವಲ ಒತ್ತಡದಿಂದಲೆ ಇಲ್ಲದ ಸಮಸ್ಯೆಯನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಪ್ರತಿ ಒಳ್ಳೆಯ ಕೆಲಸಕ್ಕೂ ಕಾಲ ಕೂಡಿ ಬರಬೇಕು. ಆದರೆ, ಕಾಯುವ ತಾಳ್ಮೆ ಎಲ್ಲರಿಗೂ ಇರದು. ಅಷ್ಟಲ್ಲದೇ, ಎಲ್ಲರ ಪ್ರಶ್ನೆಗಳಿಗೆ ಉತ್ತರ ನೀಡುವುದನ್ನೂ ಕಲಿಯಬೇಕು.ಇಲ್ಲದಿದ್ದರೆ ಎದುರಾಗುವ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಒತ್ತಡಕ್ಕೊಳಗಾಗುವರೂ ಇದ್ದಾರೆ. 

ಕಾಯುವ ಸಂದರ್ಭದಲ್ಲಿ ಮಾಡಬಹುದಾದ ಕೆಲಸಗಳು

  • ನಿಮ್ಮಲ್ಲಿ ನಂಬಿಕೆ ಇರಲಿ: ಗರ್ಭಾವಸ್ಥೆಗೆ ಪ್ರಕೃತಿಯೇ ವೇದಿಕೆ ಸೃಷ್ಠಿ ಮಾಡುತ್ತದೆ. ಅಲ್ಲಿಯವರೆಗೆ ನಿಮ್ಮ ಮೇಲೆ ನಿಮಗೆ ನಂಬಿಕೆ ಇರಬೇಕು.   ಬೇರೆಯವರಿಗೆಲ್ಲ ಬಹುಬೇಗನೆ ಮಕ್ಕಳಾಗಿದ್ದಾರೆ, ಬೇರೆಯವರೆಲ್ಲ ಕಷ್ಟವೇ ಪಟ್ಟಿಲ್ಲ ಎಂದಲ್ಲ ಹೋಲಿಕೆ ಮಾಡಿಕೊಳ್ಳುವುದು ಸರಿಯಲ್ಲ. ಇದರಿಂದ ಮನಸ್ಸಿಗೆ ಇನ್ನಷ್ಟು ಬೇಸರವೇ ಹೊರತು, ಪರಿಹಾರ ಸಿಗದು. ನೆಂಟರಿಷ್ಟರಿಂದ ಪ್ರಶ್ನೆಗಳು ಬರುತ್ತಿದ್ದರೆ, ಅವುಗಳ ಕಡೆ ಗಮನ ಹರಿಸದೇ ಕಡೆಗಣಿಸುವುದು ಒಳ್ಳೆಯದು
  • ಸಂಗಾತಿಯೊಂದಿಗೆ ಸಮಯ ಕಳೆಯಿರಿ: ತಾಯ್ತನ ಆರಂಭವಾದ ಬಳಿಕ ಸಂಗಾತಿಗೆ ಸಾಕಷ್ಟು ಸಮಯ ನೀಡಲಾಗದು. ಅಷ್ಟಲ್ಲದೇ ಗರ್ಭಿಣಿ ಎಂದು ತಿಳಿದ ತಕ್ಷಣವೇ ಕೆಲವರು ತಾಯಿಯ ಮನೆಗೆ ತೆರಳಲು ಇಷ್ಟಪಡುತ್ತಾರೆ. ಈ ಹಿನ್ನಲೆಯಲ್ಲಿ ಸಿಕ್ಕಷ್ಟು ಸಮಯ ಸಂಗಾತಿಯನ್ನು ಅರಿತು, ಅವರೊಂದಿಗೆ ಕಾಲ ಕಳೆಯುವುದು ಒಳಿತು. ಇಬ್ಬರಿಗೂ ಮನಸಿಗೊಪ್ಪುವ ರೀತಿಯಲ್ಲಿ ಸುಂದರ ದಿನಗಳನ್ನು ಪೋಣಿಸಿಕೊಂಡರೆ, ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತದೆ.
  • ಪ್ರವಾಸ ಕೈಗೊಳ್ಳಿ: ಪ್ರವಾಸ ಮನಸ್ಸಿಗೆ ಹಾಗೂ ದೇಹಕ್ಕೆ ಉತ್ತೇಜನ ನೀಡುತ್ತದೆ. ಹೊಸ ವಾತಾವರಣದಿಂದ ಮನಸ್ಸಿಗೂ ಉಲ್ಲಾಸದಾಯಕರವಾಗಿರುತ್ತದೆ. ಇದರಿಂದ ಒಬ್ಬರಿಗೊಬ್ಬರು ಅರಿತುಕೊಳ್ಳಲು ಅವಕಾಶ ನೀಡಿದಂತಾಗುತ್ತದೆ. ಬದುಕಿನಲ್ಲಿ ಒಂದು ಪುಟ್ಟ ಜೀವ ಕಾಲಿಟ್ಟಾಗ ಪ್ರವಾಸಕ್ಕೆ ಸಮಯವಿರುವುದಿಲ್ಲ. ಅಥವಾ ಪುಟ್ಟ ಮಗುವಿನೊಂದಿಗೆ ಓಡಾಡುವುದು ಕಷ್ಟಸಾಧ್ಯವಾಗಿರುತ್ತದೆ.
  • ಹವ್ಯಾಸ ಅಥವಾ ಕಲಿಕೆಗೆ ಆದ್ಯತೆ ನೀಡಿ: ತಾಯ್ತನ ಎಂದಾಕ್ಷಣ ಬೇರೆ ಎಲ್ಲ ಕೆಲಸವನ್ನು ಬಿಟ್ಟು ಬಿಡಬೇಕೆಂದಿಲ್ಲ. ಹೊಸ ಹೊಸ ವಿಷಯಗಳನ್ನು ಕಲಿಯಲು ಇರುವ ಸಮಯವನ್ನು ವಿನಯೋಗಿಸಬಹುದು. ನೆಚ್ಚಿನ ಹವ್ಯಾಸಗಳಿದ್ದರೆ, ಅವುಗಳನ್ನು ಮುಂದುವರಿಸಬಹುದು. ಇದರಿಂದ ಮನಸ್ಸು ಮುದಗೊಳ್ಳುತ್ತದೆ. ಹವ್ಯಾಸಗಳನ್ನು ಸದಾ ಹಸಿರಾಗಿಟ್ಟುಕೊಂಡರೆ, ಹೆರಿಗೆಯ ನಂತರವೂ ಮುಂದುವರಿಸಿಕೊಂಡುಹೋಗಬಹುದು.
  • ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡಿ: ಮನೆಯಲ್ಲಿ ಉಳಿದ ಅಡುಗೆ ಬಿಸಾಡಲು ಸಾಮಾನ್ಯವಾಗಿ ಹೆಂಗಳೆಯರಿಗೆ ಮನಸ್ಸು ಬಾರದು. ಆಗ, ಸುಮ್ಮನೆ ಹಾಳುಮಾಡಬಾರದು ಎನ್ನುವ ಕಾರಣಕ್ಕೆ ಹೆಂಗಸರೇ ಅದನ್ನು ಸೇವಿಸುತ್ತಾರೆ. ಅದರ ಬದಲು ಮನೆಯವರೆಲ್ಲ ಹಂಚಿಕೊಂಡು ತಿನ್ನುವ ಪದ್ಧತಿ ಮಾಡಿ. ಇದರಿಂದ ಆರೋಗ್ಯದ ಮೇಲೂ ಪರಿಣಾಮ ಬೀರದು. ಇನ್ನು ಉದ್ಯೋಗಿಗಳಾಗಿದ್ದು, ಅಡುಗೆ ಮಾಡಲು ಪುರುಸೊತ್ತಿಲ್ಲದಿದ್ದರೆ, ಹೊಟೆಲ್ ನಲ್ಲಿ ಸಿಗುವುದನ್ನೆಲ್ಲ ತಿನ್ನಲೇ ಬೇಕು ಎಂದಿಲ್ಲ. ಇದ್ದಿದ್ದರಲ್ಲಿ ಯಾವುದು ಆರೋಗ್ಯಕ್ಕೆ ಉತ್ತಮ ಎನಿಸುತ್ತದೆಯೋ ಅದನ್ನು ಮಾತ್ರ ತಿನ್ನಿ. ಅದರೊಂದಿಗೆ ಆರೋಗ್ಯಕ್ಕೆ ಅಗತ್ಯವಿರುವ ಹವ್ಯಾಸ ಬೆಳೆಸಿಕೊಳ್ಳಿ. ನಡಿಗೆ, ಯೋಗ, ಪ್ರಾಣಾಯಾಮ, ನೃತ್ಯ ಅಥವಾ ಇನ್ನಾವುದೇ ಹೊಸ ದಾರಿಗಳನ್ನು ಕಂಡುಕೊಂಡರೂ ಸರಿ. ನಿಮ್ಮದೇ ಆದ ರೀತಿಯಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿರಿ.
  • ಅಗತ್ಯವೆನಿಸಿದರೆ ಮಾತ್ರ ವೈದ್ಯರ ಸಲಹೆ ಪಡೆಯಿರಿ: ಪ್ರತಿಯೊಬ್ಬರಿಗೂ ತಮ್ಮ ದೇಹದಲ್ಲಾಗುವತ್ತಿರುವ ಬದಲಾವಣೆಗಳು ಅರಿವಿಗೆ ಬಂದೇ ಬರುತ್ತದೆ. ದೇಹದಲ್ಲಿ ಎಲ್ಲವೂ ಸರಿ ಇಲ್ಲ ಎಂದೆನಿಸದರೆ ತಪ್ಪದೇ ವೈದ್ಯರನ್ನು ಭೇಟಿ ಮಾಡಿ. ವೈದ್ಯರನ್ನು ಭೇಟಿ ಮಾಡಲು ಹಿಂಜರಿಯದಿರಿ. 

ತಾಯ್ತನಕ್ಕಾಗಿ ಕೈಯಲ್ಲಿರುವ ಕೆಲಸವನ್ನೆಲ್ಲ ಬಿಟ್ಟು ಕೂರಬೇಕೆಂದಿಲ್ಲ. ಹವ್ಯಾಸ ಮರೆಯಬೇಕೆಂದಿಲ್ಲ. ತಾಯ್ತನಕ್ಕಾಗಿ ಅಗತ್ಯವಿರುವ ಸಿದ್ಧತೆಯನ್ನು ಪ್ರಕೃತಿಯೇ ಒದಗಿಸುತ್ತದೆ. ಹಾಗಾಗಿ ಹೆಣ್ಣು ತನ್ನ ಆಸೆ-ಆಕಾಂಕ್ಷೆಗಳನ್ನೆಲ್ಲ ಬದಿಗೊತ್ತಬೇಕಾಗಿಲ್ಲ. 

ಬದುಕಿನಲ್ಲಿ ಯಾವುದನ್ನೇ ಪಡೆಯಲು ಸೂಕ್ತ ಕಾಲ ಕೂಡಿಬರಲೇ ಬೇಕು. ಅಲ್ಲಿಯವರೆಗೆ ಪ್ರಯತ್ನ ನಡೆಯುತ್ತಿರಲಿ. ಅದರೊಂದಿಗೆ ಇತರ ಮನೋಲ್ಲಾಸ ನೀಡುವ ಕೆಲಸಗಳು ಮುಂದುವರಿಯುತ್ತಿರಲಿ. ಇದರಿಂದ ಒತ್ತಡವನ್ನು ಒದ್ದೊಡಿಸಬಹುದು. ಅದರಿಂದಾಗುವ ಅಡ್ಡ ಪರಿಣಾಮಕ್ಕೂ ಕಡಿವಾಣ ಹಾಕಬಹುದು. ಜೊತೆಗೆ ಒಡಲ ಹದಗೂಡಿಸಲು ಸಹಕಾರಿಯಾಗಬಹುದು.

ಚೈತ್ರ ಎಲ್ ಹೆಗಡೆ

Read Previous

ಯೋಗಾಯೋಗ – Yogayoga

Read Next

ಅಸ್ಟ್ರೋನೊಮಿಕಲ್ ಗಡಿಯಾರ

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Most Popular