ಫ್ರೀಲಾನ್ಸ್ ಕೆಲಸ ಆರಂಭಿಸಲು ಹತ್ತು ಸೂತ್ರಗಳು

ನಮಗೆ ನಾವೇ ಬಾಸ್ ಆಗಬೇಕು ಎಂದು ಅದೆಷ್ಟೋ ಜನ ಹಂಬಲಿಸುತ್ತಿರುತ್ತಾರೆ. ಆದರೆ, ಸರಿಯಾದ ನಿರ್ವಹಣೆ ಮತ್ತು ಯೋಜನೆ ಇಲ್ಲದೇ ಕನಸುಗಳು ನನಸಾಗದೇ ಉಳಿಯುತ್ತದೆ. ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಫ್ರೀಲಾನ್ಸಿಂಗ್ ಜಾಲತಾಣಗಳು ಪ್ರತಿಭೆಗಳಿಗೆ ಕೈತುಂಬ ಕೆಲಸ ನೀಡುತ್ತಿವೆ. ಆದರೆ ಫ್ರೀಲಾನ್ಸಿಂಗ್ ಅಥವಾ ಸ್ವಯಂ ಉದ್ಯೋಗ ಆರಂಭಿಸುವುದಕ್ಕೂ ಮುನ್ನ ಸೂಕ್ತ ತಯಾರಿ ನಡೆಸಲೇಬೇಕಾಗುತ್ತದೆ. ಈ ತಯಾರಿ ಹೇಗಿರಬೇಕು, ಯಾವ ಹತ್ತು ಸೂತ್ರಗಳ ಮೇಲೆ ಹೆಚ್ಚಿನ ಮಹತ್ವ ನೀಡಬೇಕು ಎಂಬುದರ ಕುರಿತು ಮಾಹಿತಿ ಇಲ್ಲಿದೆ.

1. ಪರಿಪೂರ್ಣ ರ್ಜ್ಞಾನಾರ್ಜನೆ: ಸ್ವ ಉದ್ಯೋಗದ ಮೊದಲ ಆದ್ಯತೆ ಎಂದರೆ ಸಂಪೂರ್ಣ ಜ್ಞಾನಾರ್ಜನೆ. ಪ್ರತಿ ಕೆಲಸವನ್ನು ಶ್ರದ್ಧೆಯಿಂದ ಕಲಿಯಬೇಕು. ಯಾವುದೇ ಕೆಲಸದ ಕುರಿತು ಪರಿಪೂರ್ಣ ಮಾಹಿತಿಯಿಲ್ಲದೇ ಫ್ರೀಲಾನ್ಸ್ ಆರಂಭಿಸಿದರೆ ಹೆಚ್ಚಿನ ಲಾಭ ತಂದುಕೊಡದು. ಅಗತ್ಯ ಬಿದ್ದರೆ ಸೂಕ್ತ ತರಬೇತಿ ಪಡೆಯಿರಿ, ಆಯಾ ಕ್ಷೇತ್ರದಲ್ಲಿ ಪ್ರಕಟಗೊಂಡಿರುವ ಪುಸ್ತಕಗಳನ್ನು ಓದಿರಿ, ಆಯಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಕೆಲಸವನ್ನು ಯಾವ ರೀತಿಯಲ್ಲಿ ನಿಭಾಯಿಸುತ್ತಿದ್ದಾರೆ ಎಂಬುದರ ಕುರಿತು ಮಾಹಿತಿ ಪಡೆದುಕೊಳ್ಳಿ.

2. ಬೆಳವಣಿಗೆ ಮೇಲೆ ಕಣ್ಣಿಡಿ: ಕಾಲಕ್ಕೆ ತಕ್ಕಂತೆ ಪ್ರತಿ ಕ್ಷೇತ್ರದಲ್ಲೂ ಆದ್ಯತೆ, ಬೇಡಿಕೆ, ತಂತ್ರಜ್ಞಾನ ಬದಲಾಗುತ್ತಿರುತ್ತದೆ. ಗ್ರಾಹಕರಲ್ಲಿ ಎಂದಿನ ಬೇಡಿಕೆ ಮುಂದುವರಿದಿದೆಯೇ, ಈ ಬೇಡಿಕೆ ಈಡೇರಿಸಲು ಹೊಸ ತಂತ್ರಜ್ಞಾನಗಳು ಕಾಲಿರಿಸಿವೆಯೇ ಎಂಬುದರ ಕುರಿತು ಮಾಹಿತಿ ಪಡೆಯುತ್ತಿರಬೇಕು. ಇಲ್ಲವಾದಲ್ಲಿ ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಬದಲಾಗಿ ಬೇಡಿಕೆ ಕುಸಿದರೆ, ಅದಕ್ಕೆ ತಕ್ಕಂತೆ ಒಗ್ಗಿಕೊಳ್ಳಲು ಸಹಕಾರಿಯಾಗುತ್ತದೆ.

3.ಅಗತ್ಯ ಸಮಯ ನೀಡಿ: ಸ್ವ ಉದ್ಯೋಗ ಆರಂಭಿಸುವ ಸಂದರ್ಭದಲ್ಲಿ ಹೆಚ್ಚೆಚ್ಚು ಸಮಯ ಮೀಸಲಿಡಬೇಕಾಗುತ್ತದೆ. ಈಗಾಗಲೇ ಉದ್ಯೋಗದಲ್ಲಿದ್ದರೆ, ಆ ಕೆಲಸದ ನಡುವೆ ಸೂಕ್ತ ಸಮಯ ನೀಡಲು ಸಾಧ್ಯವೇ ಎಂದು ನೋಡಿಕೊಳ್ಳಿ. ಇಲ್ಲದಿದ್ದಲ್ಲಿ ಇರುವ ಸಮಯವನ್ನೇ ಜಾಣತನದಲ್ಲಿ ಉಪಯೋಗಿಸಿಕೊಳ್ಳಬಹುದು ಎಂಬುದನ್ನು ಲೆಕ್ಕಹಾಕಿ. 

4. ಮರಳಿ ಪ್ರಯತ್ನವ ಮಾಡು: ಯಾವುದೇ ಕೆಲಸ ಮೊದಲ ಬಾರಿಗೆ ಯಶಸ್ವಿ ಕಾಣುವುದು ಬಲುಕಷ್ಟ. ಮೊದಲ 10 ಪ್ರಯತ್ನಗಳು ವಿಫಲವಾದರೂ ಸರಿ ಪ್ರಯತ್ನ ಮುಂದುವರಿಸುವುದಾಗಿ ಶಪಥ ಮಾಡಿ. ಇದರಿಂದ ಪ್ರತಿ ಬಾರಿ ವಿಫಲವಾದಾಗಲೂ ಒಂದಿಲ್ಲೊಂದು ಪಾಠ ಕಲಿಯುವ ಅವಕಾಶ ಸಿಗುತ್ತದೆ. ಜೊತೆಗೆ ಮುಂದಿನ ಬಾರಿ ನಿರ್ಧಾರ ಕೈಗೊಳ್ಳುವಾಗ ಅನುಭವ ಸಹಕಾರಿಯಾಗುತ್ತದೆ.

5. ಸಾಮಾಜಿಕ ಜಾಲತಾಣಗಳ ಬಳಕೆ: ಸಾಮಾಜಿಕ ಜಾಲತಾಣಗಳೆಂದರೆ ಕೇವಲ ಫೇಸ್‌ಬುಕ್, ಟ್ವಿಟರ್ ಮಾತ್ರವಲ್ಲ. ಉದ್ಯೋಗಿಗಳಿಗೆಂದೇ ಅದೆಷ್ಟೋ ಜಾಲತಾಣಗಳಿವೆ. ಅಂದರೆ ಲಿಂಕ್‌ಡಿನ್, ಗಿಟ್‌ಹಬ್ ಸೇರಿದಂತೆ ಹಲವು ಜಾಲತಾಣಗಳು ಸಮಾನ ಮನಸ್ಕರನ್ನು ಒಂದುಗೂಡಿಸುತ್ತವೆ. ಬಹುತೇಕ ಎಲ್ಲ ಜಾಲತಾಣಗಳು ಉಚಿತವಾಗಿದ್ದು ಅವುಗಳಲ್ಲಿ ಸೇರಿಕೊಳ್ಳುವುದು ಉತ್ತಮ. ಈ ಮೂಲಕ ಒಂದು ಸಮುದಾಯವನ್ನು ಸೃಷ್ಠಿಸಿಕೊಳ್ಳುವುದರ ಜೊತೆಗೆ ಆಯಾ ಕ್ಷೇತ್ರದಲ್ಲಿ ಆಗುತ್ತಿರುವ ಬೆಳವಣಿಗೆ ಕುರಿತಾಗಿಯೂ ಮಾಹಿತಿ ಪಡೆಯಬಹುದು.

6. ಗ್ರಾಹಕರನ್ನು ಸೆಳೆಯುವ ಜಾಣ್ಮೆ: ಒಂದು ಕಂಪನಿಯನ್ನು ಕಾರ್ಯ ನಿರ್ವಹಿಸುತ್ತಿರುವಾಗ ಕೇವಲ ಆಯಾ ಕೆಲಸದ ಮೇಲೆ ಮಾತ್ರ ಒತ್ತು ನೀಡಿದರೆ ಸಾಕಾಗುತ್ತದೆ. ಆದರೆ, ಸ್ವ ಉದ್ಯೋಗಿಗಳಾದಾಗ ಗ್ರಾಹಕರನ್ನು ಸೆಳೆಯುವ ಜಾಣ್ಮೆಯನ್ನು ಹೊಂದಬೇಕಾಗುತ್ತದೆ. ಅಂದರೆ, ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಿಸುವುದರೊಂದಿಗೆ, ಉತ್ತಮ ಮಾತು, ಸರಿಯಾದ ನಡುವಳಿಕೆ, ಸಮಯ ನಿರ್ವಹಣೆ ಸೇರಿದಂತೆ ಎಲ್ಲದರ ಕುರಿತು ಎಚ್ಚರಿಕೆಯಿಂದ ಇರಬೇಕಾಗುತ್ತದೆ.

7 . ಸರಿಯಾದ ವೇದಿಕೆ ಆಯ್ದುಕೊಳ್ಳಿ: ಸ್ವ ಉದ್ಯೋಗಿಗಳಿಗೆ ಹಲವು ವೇದಿಕೆಗಳಿವೆ. ಅವುಗಳಲ್ಲಿ ನಿಮಗೆ ಹೊಂದುವಂತಹ ವೇದಿಕೆಯನ್ನು ಆಯ್ದುಕೊಳ್ಳಿ. ಅಂದರೆ ಕೆಲವರು ಮನೆಯಲ್ಲಿ ಕುಳಿತು ಅಂತರ್ಜಾಲದಲ್ಲಿ ಕೆಲಸ ಮಾಡಲು ಪರಿಣಿತಿ ಹೊಂದಿರುತ್ತಾರೆ. ಇನ್ನು ಕೆಲವರಿಗೆ ಮನೆಯಲ್ಲಿ ಕುಳಿತು ಕೆಲಸ ಮಾಡಲಾಗದು. ಹೊರ ಪ್ರಪಂಚದೊಂದಿಗೆ ಬೆರೆತು ಕೆಲಸ ಮಾಡಲು ಉತ್ಸುಕರಾಗಿರುತ್ತಾರೆ. ಈ ಹಿನ್ನಲೆಯಲ್ಲಿ ನಿಮಗೆ ಹೊಂದುವಂಥಹ ವೇದಿಕೆ ನಿಮ್ಮದಾಗಿಸಿಕೊಳ್ಳಿ. 

8 . ನಿಮ್ಮ ಆಯ್ಕೆ ಬಗ್ಗೆ ಸ್ಥಿರತೆ ಇರಲಿ: ಯಾವುದೇ ಕೆಲಸ ಮಾಡುವಾಗಲು ಸ್ಥಿರತೆ ಅತ್ಯವಶ್ಯಕ. ಕೆಲ ದಿನಗಳ ಕಾಲ ಕೆಲಸ ಮಾಡಿ ಬೇಸರ ಬಂತೆಂದು ಬೇರೆ ಕೆಲಸದತ್ತ ವಾಲುವುದು ಸರಿಯಾದ ಪದ್ಧತಿಯಲ್ಲ. ಅನುಭವ ಹೊಂದುತ್ತ ಹೋದಂತೆ ಆದಾಯವೂ ಹೆಚ್ಚುತ್ತ ಹೋಗುತ್ತದೆ. ಆದರೆ ಸ್ಥಿರತೆ ಇಟ್ಟುಕೊಳ್ಳದಿದ್ದಲ್ಲಿ ಆದಾಯದ ಮೇಲೆ ಹೊಡೆತ ಬೀಳುವ ಸಾಧ್ಯತೆಗಳಿರುತ್ತವೆ. 

9 . ಉಚಿತ ಕೆಲಸ ಮಾಡಿ ನಿಮ್ಮ ಬಗ್ಗೆ ಅರಿತುಕೊಳ್ಳಿ: ಸ್ವ ಉದ್ಯೋಗ ಮಾಡುವುದು ಅಂದುಕೊಂಡಷ್ಟು ಸುಲಭವಲ್ಲ. ನಿಗದಿತ ಸಮಯಕ್ಕೆ ಕೆಲಸ ಪೂರ್ಣಗೊಳಿಸಬೇಕು. ಜೊತೆಗೆ ಗ್ರಾಹಕರನ್ನು ತೃಪ್ತಿಗೊಳಿಸುವುದು ಸುಲಭದ ಮಾತಲ್ಲ. ಇದಕ್ಕೆ ನೀವು ಸಿದ್ಧರಿದ್ದಾರಾ ಎಂದು ಪರೀಕ್ಷಿಸಿಕೊಳ್ಳಲು ಹತ್ತಿರದ ಸ್ನೇಹಿತರಿಗೆ ಅಥವಾ ನಿಮ್ಮ ಪರಿಚಯದವರ ಬಳಿ ಕೆಲಸ ಪಡೆದು ಮಾಡಿ ನೋಡಿ. ನಿಗದಿತ ಸಮಯಕ್ಕೆ ಕೆಲಸ ಪೂರ್ಣಗೊಳಿಸಲು ಸಾಧ್ಯವಿದೆ, ಗ್ರಾಹಕರನ್ನು ಸಂತೃಪ್ತಿಗೊಳಿಸುವ ಶಕ್ತಿ ನಿಮ್ಮಲ್ಲಿದೆ ಎಂದರೆ ಸ್ವಉದ್ಯೋಗಕ್ಕೆ ಮುಂದಾಗಬಹುದು. 

10. ಉತ್ತಮ ಬಯೋಡೇಟಾ ತಯಾರಿಸಿ: ಮೇಲಿನ ಎಲ್ಲ ಸಿದ್ಧತೆಯೊಂದಿಗೆ ನಿಮ್ಮ ಬಯೋಡೇಟಾ ಸೃಷ್ಠಿಸಲು ಅತಿ ಹೆಚ್ಚಿನ ಆದ್ಯತೆ ನೀಡಿ. ನಿಮ್ಮಲ್ಲಡಗಿರುವ ಪ್ರತಿಭೆ ಕುರಿತಾಗಿ, ನೀವು ಸಮರ್ಪಕವಾಗಿ ನಿಭಾಯಿಸಿರುವ ಕೆಲಸಗಳ ಬಗ್ಗೆ ಜಗಜ್ಜಾಹಿರುಪಡಿಸಿ.

ಎಲ್ಲ ಕ್ಷೇತ್ರಗಳಲ್ಲೂ ಇರುವಂತೆ ಸ್ವ ಉದ್ಯೋಗದಲ್ಲೂ ಆರಂಭಿಕ ತೊಡಕುಗಳು ಸರ್ವೇ ಸಾಮಾನ್ಯ. ಹಾಗೆಂದು ಕುಗ್ಗುವ ಅವಶ್ಯಕತೆ ಇಲ್ಲ. ಪ್ರತಿ ಹೆಜ್ಜೆ ಇಟ್ಟಾಗಲೂ ತಪ್ಪಾದರೆ, ಅದನ್ನು ಅರಿತು ಸರಿಪಡಿಸಿಕೊಳ್ಳಬೇಕು. ಮುಂದಿನ ಹೆಜ್ಜೆ ಇಡುವಾಗ ಹಿಂದೆ ಮಾಡಿದ ತಪ್ಪನ್ನು ಮರುಕಳಿಸದಂತೆ ನೋಡಿಕೊಳ್ಳಬೇಕು. ಜಾಣ್ಮೆಯಿಂದ ಸೂಕ್ತ ತಯಾರಿ ನಡೆಸಿ ಸ್ವ ಉದ್ಯೋಗದ ಕ್ಷೇತ್ರಕ್ಕೆ ದುಮುಕಿದಲ್ಲಿ ಯಶಸ್ಸು ಕಟ್ಟಿಟ್ಟಬುತ್ತಿ.

 

ಚೈತ್ರ ಎಲ್ ಹೆಗಡೆ

Read Previous

ಸುಳ್ಳು ಪತ್ತೆ ಸಾಧನ

Read Next

ಯೋಗಾಯೋಗ – Yogayoga

Most Popular