ತಾಯ್ತನದಿಂದ ಬದುಕು ಹೇಗೆ ಬದಲಾಗುತ್ತೆ ಗೊತ್ತಾ?

ತಾಯ್ತನ ಎಂಬುದು ಒಂದು ಸುಧೀರ್ಘ ಪಯಣ. ಗರ್ಭಾವಸ್ಥೆಯಿಂದ ಆರಂಭವಾಗುವ ಈ ಪಯಣಕ್ಕೆ ಕೊನೆಯಿಲ್ಲ. ತಾಯ್ತನ ಆರಂಭವಾದಾಗಿನಿಂದ ಬದುಕು ಹೊಸ ದಿಕ್ಕಿನಲ್ಲಿ ಚಲಿಸಲು ಆರಂಭಿಸುತ್ತದೆ. ಯಾವ ದಿಕ್ಕಿನಲ್ಲಿ ಏನು ಎದುರಾಗುತ್ತದೆ ಎಂಬುದು ಊಹಿಸುವುದು ಕಷ್ಟಸಾಧ್ಯ. ಆದರೆ, ತಾಯ್ತನದಿಂದ ಪ್ರತಿಯೊಂದು ಹೆಣ್ಣಿನಲ್ಲಿ ಬದಲಾವಣೆ ಗಾಳಿ ಬೀಸುವುದಂತೂ ಸತ್ಯ. 

ರೇವತಿ ಸಾಫ್ಟವೇರ್ ಕಂಪನಿ ಉದ್ಯೋಗಿ. ಕೆಲಸವೆಂದರೆ ಅವಳಿಗೆ ಅಚ್ಚುಮೆಚ್ಚು. ಅಷ್ಟಲ್ಲದೇ, ವೀಕೆಂಡ್ ಪಾರ್ಟಿಗಳು, ವರ್ಷಕ್ಕೊಂದು ಫಾರಿನ್ ಟೂರ್, ಲಾಂಗ್ ವೀಕೆಂಡಿನಲ್ಲಿ ದೇಶದ ತುಂಬೆಲ್ಲ ಸುತ್ತುವುದು ನಡದೇ ಇತ್ತು. ಆದರೆ, ಮಗಳು ಬಂದಾಗಿನಿಂದ ಅವಳ ಆದ್ಯತಗಳೇ ಬದಲಾಗಿ ಹೋಯಿತು. ಪಾರ್ಟಿಗಳಿಗೆ ಕತ್ತರಿ ಬಿತ್ತು. ಟೂರ್ ಹೋಗಬೇಕಾದರೆ ಚೈಲ್ಡ್ ಫ್ರೆಂಡ್ಲಿ ಅಂದರೆ ಮಕ್ಕಳ ಸ್ನೇಹಿ ತಾಣಗಳಿಗೆ ಭೇಟಿ ನೀಡಲಾರಂಭಿಸಿದಳು. ಕೆಲಸ ಮುಗಿಸಿದರೆ ಸಾಕು, ಮೊದಲು ಮಗಳನ್ನು ಮಡಿಲಲ್ಲಿ ತೆಗೆದುಕೊಳ್ಳಬೇಕು ಎಂದು ಓಡೋಡಿ ಮನೆಗೆ ಬರಲಾರಂಭಿಸಿದಳು. ಮನೆಯ ಬಗ್ಗೆ ಅಷ್ಟಾಗಿ ಎಂದೂ ಪ್ರಾಮುಖ್ಯತೆ ನೀಡದವಳು, ಕೆಲಸ ಮುಗಿದ ಬಳಿಕ ಮನೆಯಲ್ಲಿಯೇ ಸಮಯ ಕಳೆಯುವುದು ಇಷ್ಟಪಡಲಾರಂಭಿಸಿದಳು. 

ಇದು ಒಬ್ಬಳ ಕಥೆಯಲ್ಲ. ತಾಯ್ತನದ ಬಳಿಕ ಅನೇಕ ಬಗೆಯ ಬದಲಾವಣೆ ಎದುರಾಗುತ್ತ ಹೋಗುತ್ತದೆ. ಬದಲಾವಣೆಗೆ ಮನಸು ಹೇಗೆ ಒಗ್ಗಿಕೊಳ್ಳುತ್ತಾ ಹೋಗುತ್ತದೆ. ಬದಲಾವಣೆ ನಿಜಕ್ಕೂ ಸಾಧ್ಯವೇ… ಅದಕ್ಕೆಂದೇ ತಯಾರಿ ಅಗತ್ಯವೇ ಹೀಗೆ ನೂರು ಪ್ರಶ್ನೆಗಳು ಮನದಲ್ಲಿ ಮೂಡುವುದು ಸಹಜ. ನಿಜ ಹೇಳಬೇಕೆಂದರೆ ಈ ಬದಲಾವಣೆಗೆ ತಯಾರಿಯ ಅವಶ್ಯಕತೆ ಇಲ್ಲ. ಸಮಯಕ್ಕೆ ತಕ್ಕಂತೆ ಮನಸು ತಾಯ್ತನದತ್ತ ವಾಲುತ್ತ ಹೋಗುತ್ತದೆ.  

ಬದಲಾವಣೆಯ ಹಾದಿಗಳು 

  • ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಮಗುವಿನ ಬಗ್ಗೆ ಚಿಂತನೆ: ಬದುಕಿನ ಪ್ರತಿ ಹಂತದಲ್ಲೂ ಒಂದಿಲ್ಲೊಂದು ಮಹತ್ತರದ ನಿರ್ಧಾರ ತೆಗೆದುಕೊಳ್ಳಲೇಬೇಕಾಗುತ್ತದೆ. ಅದರಲ್ಲೂ ಮಗು ಬಂದ ಬಳಿಕ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಮಗುವಿನ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂದು ಯೋಚಿಸಿಯೇ ಮುಂದಿನ ಹೆಜ್ಜೆ ಇಡಲಾಗುತ್ತದೆ. ಅಷ್ಟಲ್ಲದೇ, ಮಗುವಿನ ಕಾರಣಕ್ಕಾಗಿಯೇ ಏಷ್ಟೋ ನಿರ್ಧಾರಗಳನ್ನು ಬದಲಾಯಿಸುವ ಚಿಂತನೆಯನ್ನು ಮಾಡಲಾಗುತ್ತದೆ. 
  • ಆರೋಗ್ಯದ ಬಗ್ಗೆ ಕಾಳಜಿ: ಹೆಣ್ಣು ಮಕ್ಕಳು ಸಾಮಾನ್ಯವಾಗಿ ಉತ್ತಮ ಸೇವೆ ಮಾಡಲು ಸಿದ್ಧ ಹಸ್ತರಾಗಿರುತ್ತಾರೆ. ಆದರೆ, ತಮ್ಮ ಆರೋಗ್ಯದ ಪ್ರಶ್ನೆ ಬಂದಾಗ ಕಾಳಜಿ ವಹಿಸುವುದು ಅಷ್ಟಕ್ಕಷ್ಟೇ. ಆದರೆ, ಗರ್ಭಾವಸ್ಥೆಯ ಸಮಯದಲ್ಲಿ ಹೆಂಗಳೆಯರಿಗೆ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಬರುತ್ತದೆ. ತಿನ್ನುವ ಪ್ರತಿ ತುತ್ತು ಯೋಚಿಸಿಯೇ ತಿನ್ನಲು ಮುಂದಾಗುತ್ತಾರೆ. ಎಂದೂ ನಡಿಗೆ, ಯೋಗ, ಪ್ರಾಣಾಯಾಮ ಸೇರಿದಂತೆ ಯಾವುದಕ್ಕೂ ಪ್ರಾಮುಖ್ಯತೆ ನೀಡದವರು, ಒಮ್ಮೆಲೇ ಕಾಳಜಿ ವಹಿಸಲು ಮುಂದಾಗುತ್ತಾರೆ. ಆರೋಗ್ಯದ ಬಗ್ಗೆ ಎಲ್ಲ ಕಡೆಯಿಂದ ಮಾಹಿತಿ ಪಡೆದು, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಮುಂದಾಗುತ್ತಾರೆ. (ಕೆಲವೊಮ್ಮೆ ಹೆರಿಗೆಯ ನಂತರ ಇದು ಮಾಯವಾಗುವ ಸಾಧ್ಯತೆಗಳು ಇರುತ್ತವೆ). ಆದರೆ, ಏಂದೂ ಆರೋಗ್ಯ ಕಾಳಜಿ ಮಾಡದವರೂ ಕೂಡ ತಮ್ಮ ದೇಹವನ್ನು ಆರೈಕೆ ಮಾಡಲು ತೊಡಗುತ್ತಾರೆ.
  • ದೇಹದಲ್ಲಿ ಬದಲಾವಣೆ: ದೇಹದಲ್ಲಿ ಅನೇಕ ಬದಾಲವಣೆಗಳು ಆಗುತ್ತದೆ. ಒಂದೆಡೆ ಪ್ರಕೃತಿ ದತ್ತವಾಗಿ ಆಗಬೇಕಾದ ಕೆಲ ಬದಲಾವಣೆಗಳು ಗೋಚರಿಸುತ್ತದೆ. ಇನ್ನೊಂದೆಡ ಅಚಾನಕ್ಕಾಗಿ ಆರೋಗ್ಯದಲ್ಲಿ ಏರುಪೇರಾಗಿ ಅಥವಾ ಇನ್ನಾವುದೇ ಕಾರಣಗಳಿಗಾಗಿ ದೇಹದಲ್ಲಿ ಬದಲಾವಣೆಗಳಾಗುತ್ತದೆ. ಗರ್ಭಾವಸ್ಥೆಗೂ ಮುನ್ನ ಇರುವ ದೇಹ ಹೆರಿಗೆಯ ನಂತರದ ದಿನಗಳಲ್ಲಿ ಇರುವುದಿಲ್ಲ. ಕೆಲವು ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಬಹುದು. ಇನ್ನು ಕೆಲ ಸಮಸ್ಯೆಗಳು ಶಾಶ್ವತವಾಗಿ ನಮ್ಮೊಂದಿಗೆ ಇರುವ ಸಾಧ್ಯತೆಗಳಿರುತ್ತವೆ.
  • ಆದ್ಯತೆಯಲ್ಲಿ ಬದಲಾವಣೆ: ತಾಯ್ತನಕ್ಕೂ ಮುನ್ನ ಆದ್ಯತೆಗಳು ಬೇರೆ ರೀತಿಯಲ್ಲಿದ್ದರೆ, ತಾಯ್ತನಕ್ಕೆ ಕಾಲಿರಿಸಿದ ಬಳಿಕ ಆದ್ಯತೆಗಳು ಬದಲಾಗುತ್ತದೆ. ಉದಾಹರಣೆಗೆ ಉದ್ಯೋಗಕ್ಕೆ ಅತಿಹೆಚ್ಚು ಆದ್ಯತೆ ನೀಡುತ್ತಿದ್ದರೆ, ತಾಯ್ತನದ ಬಳಿ ಮನೆಯ ಆಗುಹೋಗಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಬಹುದು. ಉದ್ಯೋಗಕ್ಕೆ ತಿಲಾಂಜಲಿ ಇಟ್ಟು ಮಗುವಿನ ಆರೈಕೆಯಲ್ಲಿ ತೊಡಗಲೂ ಬಹುದು. ತಾಯ್ತನಕ್ಕೂ ಮುನ್ನ ಅಡುಗೆಗೆ ಆದ್ಯತೆ ನಿಡದೇ ಇರಬಹುದು. ಬದುಕಿನಲ್ಲಿ ಮಗು ಕಾಲಿರಿಸಿದ ಬಳಿಕ, ಮಗುವಿಗಾಗಿ ಹೊಸ ಹೊಸ ಅಡುಗೆ ಮಾಡುವ ಮನಸಾಗಬಹುದು. 
  • ನೋಡುವ ನೋಟದಲ್ಲಿ ಬದಲಾವಣೆ: ಕೆಲವು ಬದಲಾವಣೆಗಳು ಬದುಕಿನಲ್ಲಿ ಬಹುದೊಡ್ಡ ಪಾಠವನ್ನು ಕಲಿಸುತ್ತವೆ. ಪತಿ-ಪತ್ನಿಯರಾಗಿದ್ದ ನಾವು ತಂದೆ ತಾಯಿಗಳಾಗಿದ್ದೇವೆ ಎನ್ನುವ ಮನೋಭಾವನೆ ನಮ್ಮ ಯೋಚನಾ ಲಹರಿಯಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಮಗುವಿನ ಅವಶ್ಯಕತೆಗೆ ಅನುಗುಣವಾಗಿ ಪ್ರತಿ ವಸ್ತುವಿಗೂ ನೀಡುವ ಆದ್ಯತೆ ಅವಲಂಭಿಸುವ ಸಾಧ್ಯತೆಗಳಿರುತ್ತದೆ. 
  • ಮಾಯವಾಗುವ ಹುಡುಗಾಟಿಕೆ: ಒಡಲಲ್ಲಿ ಕುಡಿಯೊಂದು ಅರಳುತ್ತಿದೆ ಎನ್ನುವಾಗ ಹುಡುಗಾಟಿಕೆಯಲ್ಲಿ ಮಾಯವಾಗುತ್ತದೆ. ಹಣ ಖರ್ಚು ಮಾಡುವಾಗ ತೂಗಿ ಅಳೆದು ವ್ಯಯಿಸುತ್ತೇವೆ. ಮನದಲ್ಲಿ ಗಂಭೀರತೆ ಮೂಡುತ್ತದೆ. ಅದು ವರ್ತನೆ ಮೇಲೂ ಪರಿಣಾಮ ಬೀರುತ್ತದೆ.

ಈ ಬದಲಾವಣೆಗಳೆಲ್ಲ ಕಣ್ಣಿಗೆ ಕಾಣಿಸದು. ತಾಯ್ತನದ ಹಂತದಲ್ಲಿ ಪ್ರಕೃತಿ ದತ್ತವಾಗಿ ಬದಲಾವಣೆಯಾಗುತ್ತ ಸಾಗುತ್ತದೆ. ವರುಷಗಳ ಬಳಿಕ ಹಿಂದನ ದಿನಗಳನ್ನು ನೆನೆದಾಗ, ಬದಲಾವಣೆಯ ಕುರುಹುಗಳು ಬದುಕಿನಲ್ಲಿ ಕಾಣ ಸಿಗುತ್ತವೆ. ಕೆಲವು ಧನಾತ್ಮಕ ಬದಲಾವಣೆಗಳಾದರೆ, ಇನ್ನು ಕೆಲವು ನಕಾರಾತ್ಮಕ ಬೆಳವಣಿಗೆಗಳು ಆಗುತ್ತದೆ. ಆದರೆ, ತಾಯ್ತನದಲ್ಲಿ ಒಮ್ಮೆ ಧುಮುಕಿದಾಗ ಕಾಣುವುದು ಮಗು ಮತ್ತು ಮಗುವಿನ ಆರೈಕೆ ಮಾತ್ರ. 

 

ಚೈತ್ರ ಎಲ್ ಹೆಗಡೆ

Read Previous

ಲವ್ ಎಟ್ ಫಸ್ಟ್ ಸೈಟ್ – Love at first sight

Read Next

ಪುಸ್ತಕ ಭಂಡಾರ

Most Popular