ಫ್ರೀಲಾನ್ಸಿಂಗ್ ಅದೆಷ್ಟು ಲಾಭ ಗೊತ್ತಾ?

ಬೆಳಗ್ಗೆ ಒಂಬತ್ತಕ್ಕೆ ಕಚೇರಿಗೆ ತೆರಳಿ ಸಂಜೆ ಐದರ ತನಕ ಬಾಸ್ ಎದುರು ಕುಳಿತು ಕಾರ್ಯ ನಿರ್ವಹಿಸುವ ಸಾಂಪ್ರದಾಯಿಕ ಪ್ರಕ್ರಿಯೆ ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿದೆ. ದಿನಪೂರ್ತಿ ಕಚೇರಿಯಲ್ಲಿ ಕಳೆದು, ತಿಂಗಳಾಂತ್ಯಕ್ಕೆ ಸಂಬಳಕ್ಕಾಗಿ ಕಾಯುವ ವ್ಯವಸ್ಥೆ ತನ್ನ ವರ್ಚಸ್ಸನ್ನು ಕಳೆದುಕೊಳ್ಳುತ್ತಿದೆ. ಅದರ ಬದಲಾಗಿ ಯುವ ಮನಸುಗಳು ಫ್ರೀಲಾನ್ಸಿಂಗ್ ಕಡೆ ಮುಖ ಮಾಡುತ್ತಿದ್ದಾರೆ.

ತಂತ್ರಜ್ಞಾನದ ಯುಗದಲ್ಲಿ ಸ್ವ ಉದ್ಯೋಗ ನಿಭಾಯಿಸುವುದು ಸುಲಭ ಹಾಗೂ ಗಳಿಸುವುದು ಸರಳವಾಗಿದೆ. ಉದ್ಯೋಗದ ಕ್ಷೇತ್ರದಲ್ಲಿ ಎಲ್ಲಿಲ್ಲದ ಬೇಡಿಕೆ ಬರುತ್ತಿದೆ. ಕಚೇರಿಯಲ್ಲಿ ಓರ್ವ ವ್ಯಕ್ತಿಗೆ ಸೌಕರ್ಯ ನೀಡಿ ಕೆಲಸ ಮಾಡಿಸಿಕೊಳ್ಳುವ ಬದಲಾಗಿ, ಇರುವ ಕೆಲಸವನ್ನು ಸ್ವ ಉದ್ಯೋಗಿಗಳಿಗೆ ನೀಡಿ, ಇಂತಿಷ್ಟು ದಿನಕ್ಕೆ ಕೆಲಸ ಪೂರ್ತಿಗೊಳಿಸಿ ಕೊಡಿ ಎಂದು ಹೇಳುವುದು ಸುಲಭವೆನಿಸಿದೆ. ಈ ಹಿನ್ನಲೆಯಲ್ಲಿ ಫ್ರೀಲಾನ್ಸಿಂಗ್  ಕೈ ತುಂಬ ಹಣ ಗಳಿಸುವ ಮಾರ್ಗವಾಗಿ ಪರಿಣಮಿಸಿದೆ. ಸ್ವ ಉದ್ಯೋಗಿಯಾಗುವುದರಿಂದ ಅದೆಷ್ಟು ಲಾಭಗಳಿವೆ ಗೊತ್ತೇ?

  • ನಮಗೆ ನಾವೇ ಬಾಸ್!: ಒಂದು ಕಚೇರಿಯಲ್ಲಿ ಕಾರ್ಯ ನಿರ್ವಹಿಸಬೇಕೆಂದರೆ ಅಲ್ಲಿನ ಮೇಲಧಿಕಾರಿಗೆ ತಲೆ ಬಾಗಲೇಬೇಕು. ನಮಗೆ ಒಪ್ಪಿಗೆ ಇದೆಯೋ ಅಥವಾ ಇಲ್ಲವೋ ಆಯಾ ಕೆಲಸಗಳನ್ನು ನಿರ್ವಹಿಸಿ ಕೊಡಲೇ ಬೇಕು. ಆದರೆ, ಫ್ರೀಲಾನ್ಸಿಂಗ್ ಆರಂಭಿಸಿದರೆ ನಮಗೆ ನಾವೇ ಬಾಸ್ ಆಗಬಹುದು. ಯಾರ ಆಣತಿಯಂತೆ ಕೆಲಸ ಮಾಡಬೇಕು ಎಂದಿಲ್ಲ. ನಮ್ಮ ಅನುಕೂಲಕ್ಕೆ ತಕ್ಕಂತೆ ಕೆಲಸ ಮಾಡಬಹುದು.
  • ಬೆಟ್ಟದಷ್ಟು ಆದಾಯ: ಫ್ರೀಲಾನ್ಸಿಂಗ್ ಬಹುದೊಡ್ಡ ಅನುಕೂಲತೆ ಎಂದರೆ ಆದಾಯಕ್ಕೆ ಮಿತಿ ಇಲ್ಲ. ನಮ್ಮ ಶ್ರಮಕ್ಕೆ ತಕ್ಕಂತೆ ಆದಾಯ ಗಳಿಸಬಹುದು. ವರ್ಷಕ್ಕೊಮ್ಮೆ ನಮ್ಮ ಸಂಬಳ ಏರಿಕೆಯಾಗುತ್ತದೆಯೇ ಅಥವಾ ಮೇಲಧಿಕಾರಿಯನ್ನು ಮೆಚ್ಚಿಸಿ ಸಂಬಳ ಪಡೆಯಬೇಕೆ ಎಂಬೆಲ್ಲ ಸಮಸ್ಯೆಗಳು ಇರದು. ಕೆಲಸ ಮಾಡಿದಷ್ಟು ಹಣಗಳಿಸುತ್ತ ಹೋಗಬಹುದು.
  • ನಿಮ್ಮ ಲಾಭ ನಿಮಗೆ: ಹೌದು. ಅದೆಷ್ಟೋ ಕೆಲಸಗಳನ್ನು ಮಾಡಿ ಕಂಪನಿಗಳಿಗೆ ಕೋಟ್ಯಂತರ ಲಾಭ ತಂದುಕೊಟ್ಟರೆ, ಸಂಬಂಧಪಟ್ಟ ಉದ್ಯೋಗಿಗಳಿಗೆ ಅದರ ಲಾಭ ಸಿಗುವುದೇ ಇಲ್ಲ. ಕೇವಲ ಸಂಬಳಕ್ಕೆ ತೃಪ್ತಿ ಪಡಬೇಕು. ಆದರೆ, ಫ್ರೀಲಾನ್ಸಿಂಗ್‌ನಲ್ಲಿ ಯಾವುದೇ ಕೆಲಸಕ್ಕೆ ಸಿಕ್ಕ ಲಾಭಾಂಶವನ್ನು ಯಾರೊಂದಿಗೂ ಹಂಚಿಕೊಳ್ಳುವ ಅವಶ್ಯಕತೆ ಇಲ್ಲ. ಹಂಚಿಕೊಂಡರೂ ಅದು ಕೇವಲ ಸಣ್ಣ ಮೊತ್ತವಾಗಿರುತ್ತದೆ. 
  • ಬೇಕೆಂದಾಗ ಬಿಡುವು: ಒಂದು ಕಂಪನಿಯಲ್ಲಿ ಕೆಲಸ ಮಾಡತೊಡಗಿದರೆ ಸ್ವಂತಕ್ಕೆ ಕೆಲ ಸಮಯ ಬೇಕು ಎಂದರೆ ಮೇಲಧಿಕಾರಿಯ ಅಪ್ಪಣೆ ಬೇಕು. ಅಂದರೆ ಮೇಲಧಿಕಾರಿಗಳು ಒಪ್ಪಿದರೆ ಮಾತ್ರ ರಜೆ. ಇಲ್ಲದಿದ್ದಲ್ಲಿ ಕೆಲಸಕ್ಕೆ ಹಾಜರಾಗಲೇ ಬೇಕು. ಆದರೆ ಫ್ರೀಲಾನ್ಸಿಂಗ್‌ನಲ್ಲಿ ಹಾಗಿಲ್ಲ. ಬೇಕೆಂದಾಗ ಬ್ರೇಕ್ ತೆಗೆದುಕೊಳ್ಳಬಹುದು. ಸರಿಯಾಗಿ ಯೋಜನೆ ಹಾಕಿಕೊಂಡರೆ, ಯಾವಾಗ ಬೇಕಾದರೂ ಆಗ ನಮಗಾಗಿ ಹಾಗೂ ನಮ್ಮ ಕುಟುಂಬಕ್ಕಾಗಿ ಸಮಯ ಮೀಸಲಿರಿಸಬಹುದು.
  • ಆಫೀಸ್ ತೆರಳುವ ಜಂಜಾಟವಿಲ್ಲ: ಬೆಳಗಿನ ಟ್ರಾಫಿಕ್ ಕಿರಿಕಿರಿಯಲ್ಲಿ ಒಂದು ಕಚೇರಿಗೆ ತೆರಳುವಷ್ಟರಲ್ಲಿ ಉದ್ಯೋಗಿಗಳ ಅರ್ಧ ಶಕ್ತಿ ಕರಗಿ ಹೋಗಿರುತ್ತದೆ. ಇನ್ನು ಸಮಯಕ್ಕೆ ಸರಿಯಾಗಿ ತಲುಪುವುದು ಕೂಡ ಬಹುದೊಡ್ಡ ಸವಾಲು. ಆದರೆ ಸ್ವ ಉದ್ಯೋಗಿಗಳಾದರೆ ಇಂಥಹ ಸಮಸ್ಯೆಗಳಿರುವುದಿಲ್ಲ. ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸಿಕೊಡಬೇಕು ಅಷ್ಟೇ.. ಮನೆಯಿಂದ ಕೆಲಸ ಮಾಡಿದರೂ ಸರಿ, ಇನ್ನಾವುದೇ ಸ್ಥಳದಿಂದ ಕೆಲಸ ಮಾಡಿದರೂ ಸರಿ.. ನಿಗದಿತ ಸಮಯಕ್ಕೆ ಹೇಳಿದ ಕೆಲಸ ಮಾಡಿದರೆ ಕೈತುಂಬ ಹಣ ಬಂದಿರುತ್ತದೆ.
  • ಆಯ್ಕೆಯ ಅವಕಾಶ: ಒಂದು ಕಚೇರಿಯಲ್ಲಿ ಕಾರ್ಯ ನಿರ್ವಹಿಸಬೇಕೆಂದರೆ ಅಲ್ಲಿದ್ದ ಕೆಲಸಗಳನ್ನು ಮಾತ್ರ ಮಾಡಿ ಒಪ್ಪಿಸಬೇಕು. ಅದರ ಹೊರತಾಗಿನ ಕೆಲಸಗಳು ಲಭಿಸದು. ಅಷ್ಟಲ್ಲದೇ, ಮಾಡುತ್ತಿರುವ ಕೆಲಸ ತೃಪ್ತಿ ಕೊಡುತ್ತಿಲ್ಲವಾದರೂ ಕೆಲಸ ಮಾಡಲೇ ಬೇಕಾದ ಅನಿವಾರ್ಯತೆ ಇರುತ್ತದೆ. ಆದರೆ, ಸ್ವ ಉದ್ಯೋಗಿಗಳಿಗೆ ಕೆಲಸ ಇಷ್ಟವಾದರೆ ಮಾತ್ರ ಮುಂದುವರಿಯಬಹುದು. ಅಥವಾ ಇಷ್ಟದ ಕೆಲಸವನ್ನೇ ಹುಡುಕಿಕೊಂಡು ಮಾಡಬಹುದು.
  • ಜನರನ್ನು ನಿಭಾಯಿಸುವ ಕಲೆ ತಿಳಿಯುತ್ತದೆ: ಪ್ರತಿ ಹೊಸ ಪ್ರೊಜೆಕ್ಟ್ ಕೈಗೆತ್ತಿಕೊಂಡಾಗಲೂ ಹೊಸ ಮುಖಗಳ ಪರಿಚಯವಾಗುತ್ತದೆ. ಇದರಿಂದ ಜನರನ್ನು ನಿಭಾಯಿಸುವ ಕಲೆ ಚನ್ನಾಗಿ ತಿಳಿಯುತ್ತದೆ. ಯಾವ ಕ್ಲೈಂಟ್ಸ್ ಜೊತೆ ಹೇಗಿರಬೇಕು. ಅವರು ಏನನ್ನು ನಿರೀಕ್ಷಿಸುತ್ತಿದ್ದಾರೆ. ಅವರ ನಿರೀಕ್ಷೆಗೆ ತಕ್ಕ ಹಾಗೆ ನಿಲ್ಲುವುದು ಹೇಗೆ ಎಂಬೆಲ್ಲ ವಿಷಯಗಳು ಅರ್ಥವಾಗುತ್ತದೆ. 
  • ಕಂಪನಿಗಳೊಂದಿಗೆ ಬಾಂಧವ್ಯ ವೃದ್ಧಿ: ಪ್ರತಿ ಹೊಸ ಪ್ರೊಜೆಕ್ಟಗಳನ್ನು ಮುಕ್ತಾಯಗೊಳಿಸಿದಾಗಲೂ ಹೊಸ ಜನರ ಪರಿಚಯವಾಗುತ್ತದೆ. ಇದರಿಂದ ಒಂದು ಸುಂದರ ನೆಟ್‌ವರ್ಕ್ ಸೃಷ್ಟಿಯಾಗುತ್ತದೆ. ಒಂದು ಹಂತದ ಬಳಿಕ ನೆಟ್‌ವರ್ಕ್ ಸಹಾಯದಿಂದಲೇ ಮೇಲಿಂದ ಮೇಲೆ ಕೆಲಸಗಳು ದೊರಕಲಾರಂಭಿಸುತ್ತದೆ. ಇದರಿಂದ ಹೆಚ್ಚು ಶ್ರಮ ವಹಿಸದೇ ಕೆಲಸ ಕೈಗೆ ಬರುತ್ತದೆ.
  • ಕಲಿಕೆಗೆ ಅವಕಾಶ: ಪ್ರತಿಯೊಂದು ಕ್ಷೇತ್ರಗಳಲ್ಲೂ ತಂತ್ರಜ್ಞಾನ ಮುಂದುವರಿಯುತ್ತಲೇ ಇರುತ್ತದೆ. ಹೊಸ ತಂತ್ರಜ್ಞಾನ ಬಂದಾಗ ಅದನ್ನು ಕಲಿಯುವ ಅವಕಾಶ ದೊರೆಯುತ್ತದೆ. ಇದರಿಂದ ಔಟ್ ಡೇಟೆಡ್ ಆಗಿರದೇ ಸದಾ ಹೊಸತನ್ನು ಕಲಿಯುವಂತಾಗುತ್ತದೆ.
  • ವೈಯಕ್ತಿಕ ಏಳಿಗೆ: ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ವೈಯಕ್ತಿಕ ಏಳಿಗೆ ಅಷ್ಟು ಸುಲಭವಲ್ಲ. ಕಂಪನಿ ಉತ್ತಮ ಕಾರ್ಯ ನಿರ್ವಹಿಸುತ್ತಿರುಬೇಕು. ಕಚೇರಿಯಲ್ಲಿರುವ ಮೇಲಧಿಕಾರಿ ಸಹಕಾರಿ ಮನೋಭಾವನೆ ಹೊಂದಿರಬೇಕು. ಮಾಡಿದ ಕಾರ್ಯ ಪ್ರತಿಯೊಬ್ಬರನ್ನೂ ತೃಪ್ತಿ ಪಡಿಸಲೇಬೇಕು. ಆದರೆ ಫ್ರೀಲಾನ್ಸಿಂಗ್ ಆಯ್ದುಕೊಂಡರೆ, ಪ್ರತಿಯೊಂದು ಕೆಲಸಕ್ಕೂ ಹಾಕಿದ ಶ್ರಮ ವೈಯಕ್ತಿಕ ಏಳಿಗೆಗೆ ಕಾರಣವಾಗುತ್ತದೆ. ಅದು ನಾವು ಮಾಡುವ ಕೆಲಸದ ಮೇಲೆ ನಿರ್ಧಾರವಾಗುತ್ತದೆ. ಇದರಿಂದ ಏಳಿಗಾಗಿ ಇತರರನ್ನು ಅವಲಂಭಿಸುವ ಅವಶ್ಯಕತೆ ಇಲ್ಲ. 

ಇಷ್ಟಲ್ಲದೇ ಫ್ರೀಲಾನ್ಸಿಂಗ್ ಆಯ್ದುಕೊಂಡರೆ ನಮ್ಮ ಕೆಲಸದ ಶ್ರೇಯ ನಮಗೆ ಸಲ್ಲುತ್ತದೆ. ಅವಶ್ಯಕತೆ ಇರುವಾಗ ಕುಟುಂಬದ ಜೊತೆ ಕಾಲ ಕಳೆಯಬಹುದು. ಬೇಕೆಂದಾಗೆಲ್ಲ ಬಿಡುವು ಮಾಡಿಕೊಂಡು ಹೊಸ ಹವ್ಯಾಸ ಕಲಿಯಬಹುದು. ಬಗೆ ಬಗೆಯ ತಾಣಗಳನ್ನು ನೋಡಬಹುದು. ಹೀಗೆ ಲಾಭಗಳ ಪಟ್ಟಿ ಬೆಳೆಯುತ್ತ ಹೋಗುತ್ತದೆ.

ಈಗಾಗಲೇ ಅಮೇರಿಕದಲ್ಲಿ ಶೇಕಡ 35ರಷ್ಟು ಜನ ಸ್ವ ಉದ್ಯೋಗವನ್ನು ತಮ್ಮದಾಗಿಸಿಕೊಂಡಿದ್ದಾರೆ. ಯುರೋಪ್ ನಲ್ಲೂ ಶೇಕಡ 40ರಷ್ಟು ಮಂದಿ ಸ್ವ ಉದ್ಯೋಗವನ್ನು ಅಳವಡಿಸಿಕೊಂಡು ಕೈ ತುಂಬ ಹಣ ಗಳಿಸುತ್ತಿದ್ದಾರೆ. ಸಾಂಪ್ರದಾಯಿಕ ಶೈಲಿಗಿಂತ ಹಣ ಗಳಿಸಲು ಮತ್ತು ವೈಯಕ್ತಿಕ ಏಳಿಗೆಗೆ ಉತ್ತಮ ಎಂದು ಕಂಡುಕೊಂಡಿದ್ದಾರೆ. ಇಷ್ಟಲ್ಲದೇ ಇತರ ರಾಷ್ಟ್ರಗಳಲ್ಲೂ ಸ್ವ ಉದ್ಯೋಗ ಗರಿಗೆದರತೊಡಗಿದೆ.

ಕೊನೆಯ ಸಾಲು 

ಎಲ್ಲ ಕ್ಷೇತ್ರಗಳಲ್ಲಿರುವಂತೆಯೇ ಫ್ರೀಲಾನ್ಸಿಂಗ್ ಕ್ಷೇತ್ರದಲ್ಲೂ ಅನೇಕ ಸವಾಲುಗಳಿವೆ. ಪ್ರತಿ ಯೋಜನೆ ಕೈಗೆತ್ತಿಕೊಂಡಾಗಲೂ ಹೊಸ ಪಾಠ ಕಲಿಯುತ್ತಿರಬೇಕು. ಈಗಾಗಲೇ, ಮಾಡಿದ ತಪ್ಪನ್ನು ಮರುಕಳಿಸದಂತೆ ನೋಡಿಕೊಂಡು ಮುನ್ನುಗ್ಗುಬೇಕು. ಇದರಿಂದ ಮಾತ್ರ  ಯಶಸ್ಸು ಕೈ ಹಿಡಿಯುತ್ತದೆ.

 

ಚೈತ್ರ ಎಲ್ ಹೆಗಡೆ

Read Previous

ಅಸ್ಟ್ರೋನೊಮಿಕಲ್ ಗಡಿಯಾರ

Read Next

ಬಸ್ ಟಿಕೆಟ್ – BusTicket

Most Popular