ಪ್ರತಿಭಾನ್ವಿತರಿಗೆ ಕೈತುಂಬ ಆದಾಯ ತಂದುಕೊಡುವ ಜಾಲತಾಣಗಳು

ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಪ್ರತಿಭೆ ಅಡಗಿ ಕುಳಿತಿರುತ್ತದೆ. ಕುಟುಂಬ ನಿರ್ವಹಣೆಯ ಜವಾಬ್ದಾರಿ ಹೊತ್ತು ವಿಶೇಷವಾಗಿ ಮಹಿಳೆಯರು ತಮ್ಮ ಪ್ರತಿಭೆಯನ್ನು ಬಳಸಿಕೊಳ್ಳದೇ ಮನೆಯಲ್ಲಿಯೇ ಕುಳಿತಿರುತ್ತಾರೆ. ಅಂಥವರಿಗೆಂದೇ ಹಲವು ಜಾಲತಾಣಗಳು ಅವಕಾಶಗಳನ್ನು ಮನೆ ಬಾಗಿಲಿಗೆ ತಲುಪಿಸುತ್ತಿವೆ. ಅದರೊಂದಿಗೆ ಕೈ ತುಂಬ ಹಣವನ್ನು ನೀಡುತ್ತಿವೆ.

ಅದೆಷ್ಟೋ ಕಂಪನಿಗಳಲ್ಲಿ ಕೆಲ ಆಯ್ದ ಕೆಲಸಗಳನ್ನು ಆಂತರಿಕ ಉದ್ಯೋಗಿಗಳು ಮಾಡಲಾರರು. ಅಂಥಹ ಸಂದರ್ಭದಲ್ಲಿ ಕೆಲಸಗಳನ್ನು ಸ್ವಉದ್ಯೋಗಿಗಳಿಗೆ ಹಸ್ತಾಂತರಿಸಲಾಗುತ್ತದೆ. ಆದ್ಯತೆ, ಗುಣಮಟ್ಟ, ಅನುಭವದ ಮೇಲೆ ಆದಾಯ ನೀಡಲಾಗುತ್ತದೆ. ಸ್ವಉದ್ಯೋಗಿಗಳು ತಮ್ಮ ಆಸಕ್ತಿ ಹಾಗೂ ಪ್ರತಿಭೆಗಳಿಗೆ ಅನುಗುಣವಾಗಿ ಕೆಲಸ ಆಯ್ದುಕೊಳ್ಳಬಹುದು.

ಈ ಜಾಲತಾಣಗಳಲ್ಲಿ ಮಾರ್ಕೆಟಿಂಗ್, ಕೋಡಿಂಗ್, ಕಂಟೆಂಟ್ ರೈಟಿಂಗ್, ಟ್ರಾನ್ಸಲೇಷನ್, ಡಿಸೈನ್, ಟೆಸ್ಟಿಂಗ್ ಹೀಗೆ ಬಗೆ ಬಗೆಯ ಕೆಲಸಗಳು ಇವೆ. ಒಂದೊಂದು ಜಾಲತಾಣಗಳಲ್ಲೂ ಸಾವಿರಾರು ಉದ್ಯೋಗಗಳು ಲಭ್ಯವಿದೆ. ಈಗತಾನೇ ಆರಂಭಿಸಿದ ಉದಯೋನ್ಮುಖ ಕಂಪನಿಗಳಿಂದ ಹಿಡಿದು, ಪ್ರಪಂಚದ ಅತಿದೊಡ್ಡ ಕಂಪನಿಗಳೆಲ್ಲ ತಮ್ಮಲ್ಲಿರುವ ಕೆಲಸವನ್ನು ಈ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸುತ್ತಾರೆ.  ಈ ವೆಬ್‌ಸೈಟ್‌ಗಳ ಮಾಹಿತಿ ಇಲ್ಲಿದೆ.

1. ಅಪ್‌ವರ್ಕ್ (upwork.com)

ಸ್ವಉದ್ಯೋಗಿಗಳು ಅಥವಾ ಫ್ರೀಲಾನ್ಸರ್ಸ್ ಮೊದಲ ಆದ್ಯತೆ ಎಂದರೆ ಅಪ್‌ವರ್ಕ ಡಾಟ್ ಕಾಂ. ಈ ವೆಬ್‌ಸೈಟ್‌ನಲ್ಲಿ ಬಹುತೇಕ ಎಲ್ಲ ಬಗೆಯ ಕೆಲಸಗಳು ಲಭಿಸುತ್ತವೆ. ಹಲವು ಕಂಪನಿಗಳು ತಮ್ಮಲ್ಲಿರುವ ಪ್ರೊಜೆಕ್ಟ್ ಅನ್ನು ಈ ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತವೆ. ಅದರಲ್ಲಿ ಆಸಕ್ತಿ ಇರುವ ಸ್ವಉದ್ಯೋಗಿಗಳು ತಮ್ಮ  ಬಯೋಡೆಟಾವನ್ನು ಆಯಾ ಕಂಪನಿಗಳಿಗೆ ಸಲ್ಲಿಸುತ್ತಾರೆ. ಕಂಪನಿ ಹಾಗೂ ಸ್ವಉದ್ಯೋಗಿಗಳ ನಿರೀಕ್ಷೆಗಳು ತಾಳೆಯಾದಲ್ಲಿ ಉದ್ಯೋಗಗಳು ಲಭಿಸುತ್ತವೆ. ಈ ವೆಬ್‌ಸೈಟ್‌ನಲ್ಲಿ ಕೆಲಸ ಮುಕ್ತಾಯಗೊಳಿಸಿದ ಬಳಿಕ ನೀಡುವ ಶುಲ್ಕ ಇತರ ವೆಬ್‌ಸೈಟ್‌ಗಳಿಗೆ ಹೋಲಿಸಿದಲ್ಲಿ ಅತಿ ಹೆಚ್ಚು. ಆದರೆ, ಈ ವೆಬ್‌ಸೈಟ್‌ನಲ್ಲಿ ಉದ್ಯೋಗವೂ ಅಷ್ಟೇ ಭಧ್ರವಾಗಿದೆ. ಅತ್ಯುತ್ತಮವಾಗಿರುವ ಕೆಲಸಗಳು ಈ ವೆಬ್‌ಸೈಟ್‌ನಲ್ಲಿ ಪ್ರಕಟಗೊಳ್ಳುತ್ತದೆ.

2. ಫ್ರೀಲಾನ್ಸರ್ (freelancer.com)

ಅಪ್‌ವರ್ಕ ಬಳಿಕ ಅತ್ಯಂತ ಜನಪ್ರಿಯ ಹೊಂದಿರುವ ವೆಬ್‌ಸೈಟ್‌ ಫ್ರೀಲಾನ್ಸರ್ ಆಗಿದೆ. ಈ ವೆಬ್‌ಸೈಟ್‌ನಲ್ಲಿ ಪ್ರತಿ ಪ್ರೊಜೆಕ್ಟ್ ಮುಗಿದ ಬಳಿಕ ಪಾವತಿಸಬೇಕಾಗಿರುವ ಶುಲ್ಕ ಕಡಿಮೆ. ಆದರೆ, ಈ ವೆಬ್‌ಸೈಟ್‌ನಲ್ಲಿ ಅತಿ ಹೆಚ್ಚು ಸ್ವಉದ್ಯೋಗಿಗಳನ್ನು ಹೊಂದಿದೆ. ಇದರಿಂದ ಇತರ ವೆಬ್‌ಸೈಟ್‌ಗಳಿಗೆ ಹೋಲಿಸಿದಲ್ಲಿ ಸ್ಪರ್ಧೆ ತುಸು ಹೆಚ್ಚೇ ಇದೆ. ಇದರಿಂದ ಉದ್ಯೋಗ ಲಭಿಸುವ ಪ್ರಮಾಣವು ಕುಸಿತಗೊಳ್ಳುತ್ತದೆ.

3. ಗುರು (guru.com)

ಇತರ ವೆಬ್‌ಸೈಟ್‌ಗಳಿಗೆ ಹೋಲಿಸಿದರೆ ಗುರು ಫ್ರೀಲಾನ್ಸಿಂಗ್ ವೆಬ್‌ಸೈಟ್‌ನಲ್ಲಿ ಸ್ವ ಉದ್ಯೋಗಿಗಳು ಪಾವತಿಸಬೇಕಾಗಿರುವ ಶುಲ್ಕ ಅತ್ಯಂತ ಕಡಿಮೆ. ಅಂದರೆ ಇತರ ವೆಬ್‌ಸೈಟ್‌ಗಳು ಕೆಲಸ ಪೂರ್ಣಗೊಂಡ ಬಳಿಕ ಗಳಿಸಿದ ಆದಾಯದ ಮೇಲೆ ಸ್ವ ಉದ್ಯೋಗಿಗಳಿಂದ ಶೇಕಡ 10ರಿಂದ 20ರವರೆಗಿನ ಶುಲ್ಕವನ್ನು ಪಡೆಯುತ್ತವೆ. ಆದರೆ ಗುರು ವೆಬ್‌ಸೈಟ್‌ನಲ್ಲಿ ಕೇವಲ ಶೇ.9ರಷ್ಟು ಪಾತ್ರ ಶುಲ್ಕ ಪಾವತಿಸಬೇಕಾಗುತ್ತದೆ. 

4. ಫೈವರ್ (fiverr.com)

ಸ್ವ ಉದ್ಯೋಗಿಗಳಲ್ಲಿ ಅತ್ಯಂತ ಜನಪ್ರಿಯಗೊಂಡಿರುವ ವೆಬ್‌ಸೈಟ್‌ಗಳಲ್ಲಿ ಫೈವರ್ ಅತ್ಯಂತ ಮುಂಚೂಣಿಯಲ್ಲಿದೆ.  ಇಲ್ಲಿ ಕೇವಲ ಐದು ಡಾಲರ್  ಮೂಲಕ ಕೆಲಸ ಆರಂಭಿಸಬೇಕು.ಅಂದರೆ ಮೊದಲ ಪ್ರೊಜೆಕ್ಟ್ ಕೈಗೆ ಸಿಕ್ಕರೆ ಕೇವಲ 5 ಡಾಲರ್ ಮಾತ್ರ ಲಭಿಸುತ್ತದೆ. ಬಳಿಕ ಉತ್ತಮ ಕೆಲಸ ನಿರ್ವಹಿಸುತ್ತ, ರೇಟಿಂಗ್ ಹೆಚ್ಚಿಸಿಕೊಳ್ಳುತ್ತಿದ್ದರೆ, ಹೆಚ್ಚಿನ ಹಣ ಗಳಿಸಬಹುದು.

5. ಟಾಪ್ ಟಾಲ್ (toptal.com)

ಅತ್ಯಂತ ಪ್ರಭಾವಿ ಪ್ರತಿಭಾಶಾಲಿಗಳಿಗೆಂದೇ ಈ ವೆಬ್‌ಸೈಟ್‌ ಇದೆ. ಇವುಗಳಲ್ಲಿ ಉತ್ಕೃಷ್ಟ ಕೆಲಸಗಾರರಿಗಷ್ಟೇ ಕೆಲಸ ಲಭಿಸುತ್ತದೆ. ಪ್ರತಿಭೆಗೆ ತಕ್ಕಂತೆ ಉತ್ತಮ ಆದಾಯ ಈ ವೆಬ್‌ಸೈಟ್‌ನಲ್ಲಿ ಇದೆ. ಇತರ ವೆಬ್‌ಸೈಟ್‌ಗಳಿಗೆ ಹೋಲಿಸಿದರೆ ಈ ವೆಬ್‌ಸೈಟ್‌ನಲ್ಲಿ ಆದಾಯ ಹೆಚ್ಚು. ಆದರೆ, ಈ ವೆಬ್‌ಸೈಟ್‌ನಲ್ಲಿ ಸ್ವ ಉದ್ಯೋಗಿಗಳ ಕುರಿತು ಕೂಲಂಕುಶ ಪರಿಶೀಲನೆ ನಡೆಸಿ, ಆಯ್ಕೆ ಮಾಡಲಾಗುತ್ತದೆ. ಈ ಹಿನ್ನಲೆಯಲ್ಲಿ ಅತ್ಯುತ್ತಮ ಕೆಲಸಗಾರರಿಗೆ ಮಾತ್ರ ಈ ವೆಬ್‌ಸೈಟ್‌ನಲ್ಲಿ ಅವಕಾಶ ಲಭಿಸುತ್ತದೆ.

6. ಪೀಪಲ್ ಪರ್ ಅವರ್ (peopleperhour.com)

ಸ್ವ ಉದ್ಯೋಗಿಗಳ ನೆಚ್ಚಿನ ವೆಬ್‌ಸೈಟ್‌ ಇದಾಗಿದೆ. ಈ ವೆಬ್‌ಸೈಟ್‌ನಲ್ಲಿ ಸ್ವ ಉದ್ಯೋಗಿಗಳು ತಮಗೆ ಹೊಂದಿಕೆಯಾಗುವಂತಹ ಪ್ರೋಜೆಕ್ಟ್ ಆಯ್ದುಕೊಂಡು ತಮ್ಮ ಬಯೋಡೆಟಾ ಸಲ್ಲಿಸಬಹುದು. ಜೊತೆಗೆ ಕಂಪನಿಗಳು ಕೂಡ ಸ್ವ ಉದ್ಯೋಗಿಗಳನ್ನು ಹುಡುಕಿಕೊಂಡು ಕೆಲಸ ನೀಡುತ್ತಾರೆ.

7. ಐಫ್ರೀಲಾನ್ಸ್ (ifreelance.com)

ಐಫ್ರೀಲಾನ್ಸ್ ಇತರ ವೆಬ್‌ಸೈಟ್‌ಗಳಿಗಿಂತ ಕೊಂಚ ಭಿನ್ನ. ಇತರ ವೆಬ್‌ಸೈಟ್‌ಗಳಲ್ಲಿ ಕೆಲಸ ದೊರಕಿದ ಬಳಿಕ ಆದಾಯದ ಮೇಲೆ ಶುಲ್ಕ ನೀಡಬೇಕಾಗುತ್ತದೆ. ಸ್ವ ಉದ್ಯೋಗಿಗಳಿಗೆ ಆದಾಯ ಬಂದ ಬಳಿಕವೇ ಶುಲ್ಕ ನೀಡುತ್ತಾರೆ. ಆದರೆ ಈ ವೆಬ್‌ಸೈಟ್‌ನಲ್ಲಿ ಪ್ರತಿ ತಿಂಗಳಿಗೆ ಆಯ್ಕೆಗನುಸಾರವಾಗಿ ಶುಲ್ಕ ಪಾವತಿಸಬೇಕಾಗುತ್ತದೆ. ಬಳಿಕ ಕೆಲಸದ ಹುಡುಕಾಟ ನಡೆಸಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಉದ್ಯೋಗ ಲಭಿಸುವುದಕ್ಕೂ ಮುನ್ನವೇ ಅಲ್ಪ ಪ್ರಮಾಣದ ಬಂಡವಾಳ ಹೂಡುವುದು ಅಗತ್ಯವಾಗಿದೆ.

8. ವರ್ಕ್ ಎಂಡ್ ಹೈಯರ್ (worknhire.com)

ಇದು ಭಾರತೀಯ ಕಂಪನಿಗಳಿಗೆ ಹಾಗೂ ಸ್ವ ಉದ್ಯೋಗಿಗಳಿಗಾಗಿ ಭಾರತೀಯರೇ ಆರಂಭಿಸಿರುವ ವೆಬ್‌ಸೈಟ್‌ . ಈ ವೆಬ್‌ಸೈಟ್‌ನಲ್ಲಿ ಹೆಚ್ಚಾಗಿ ಭಾರತೀಯ ಕಂಪನಿಗಳ ಕೆಲಸಗಳು ಲಭ್ಯವಿರುತ್ತದೆ. 

9. 99ಡಿಸೈನ್ಸ್ (99designs.com)

ಇತರ ವೆಬ್‌ಸೈಟ್‌ಗಳಲ್ಲಿ ಕಂಪನಿಗಳು ಕೆಲಸ ಪ್ರಕಟಿಸುತ್ತವೆ. ಸ್ವ ಉದ್ಯೋಗಿಗಳು ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಿದ ಬಳಿಕ ಕಂಪನಿಯ ನಿಯಮಾನುಸಾರವಾಗಿ ಕೆಲಸ ಒಪ್ಪಿಸಲಾಗುತ್ತದೆ. ಆದರೆ, ಈ ವೆಬ್‌ಸೈಟ್‌ನಲ್ಲಿ ನಿಗದಿತ ಕೆಲಸ ಪ್ರಕಟಗೊಂಡ ಬಳಿಕ ಆಸಕ್ತಿ ಇರುವ ಎಲ್ಲ ಸ್ವ ಉದ್ಯೋಗಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶನಕ್ಕಿಡುತ್ತಾರೆ. ಎಲ್ಲ ಉತ್ಪನ್ನಗಳಲ್ಲಿ ಅಂತಿಮವಾಗಿ ಒಂದನ್ನು ಮಾತ್ರ ಆಯ್ಕೆ ಮಾಡಿ, ನಿಗದಿತ ಮೊತ್ತ ಪಾವತಿಸಲಾಗುತ್ತದೆ.

10. ಕೋಡಿಂಗ್ ನಿಂಜಾಸ್ (coding ninjas)

ಈ ವೆಬ್‌ಸೈಟ್‌ನಲ್ಲಿ ಹೆಚ್ಚಾಗಿ ಸಾಫ್ಟವೇರ್ ಕೆಲಸಗಳು ಲಭ್ಯವಿದೆ. ಈ ವೆಬ್‌ಸೈಟ್‌ನಲ್ಲಿ ಉಚಿತವಾಗಿ ಸೇರಿಕೊಂಡು ಕೆಲಸ ಹುಡುಕಬಹುದಾಗಿದೆ.

ಮೇಲಿನ ಹತ್ತು ಅತ್ತ್ಯುತ್ತಮ ವೆಬ್‌ಸೈಟ್‌ ಹೊರತಾಗಿ ಸಿಂಪ್ಲಿ ಹೈಯರ್ಡ್, ಅಕ್ವೆಂಟ್, ಸ್ಕೈ ವರ್ಡ್, ಲೇಖಕ್, ರೈಟರ್ ಸೇರಿದಂತೆ ಇನ್ನು ನೂರಾರು ಫ್ರೀಲಾನ್ಸಿಂಗ್ ವೆಬ್‌ಸೈಟ್‌ಗಳು ಲಭ್ಯವಿದೆ. ವಿನ್ಯಾಸಕಾರರಿಗೆ, ಸಾಫ್ಟವೇರ್ ಕೆಲಸಗಾರರಿಗೆ, ಬರಹಗಾರರಿಗೆ ಸೇರಿದಂತೆ ಬಗೆ ಬಗೆಯ ಕೆಲಸಗಳಿಗೆ ಪ್ರತ್ಯೇಕ ವೆಬ್‌ಸೈಟ್‌ಗಳಿವೆ. ಸತತ ಪ್ರಯತ್ನ ಹಾಗೂ ಉತ್ತಮ ಫಲಿತಾಂಶ ನೀಡುತ್ತ ಬಂದರೆ, ಫ್ರೀಲಾನ್ಸಿಂಗ್ ವೆಬ್‌ಸೈಟ್‌ಗಳು ಉತ್ತಮ ಆದಾಯ ತಂದುಕೊಡುವುದರಲ್ಲಿ ಸಂಶಯವಿಲ್ಲ. 

ಫ್ರೀಲಾನ್ಸಿಂಗ್ ಆರಂಭಿಸುವ ಮುನ್ನ ಈ ವೆಬ್‌ಸೈಟ್‌ಗಳು ಕಾರ್ಯ ನಿರ್ವಹಿಸುವ ಬಗೆ, ಶುಲ್ಕ ಪಾವತಿಸುವ ಬಗೆ, ಅಲ್ಲಿ ದೊರೆಯುವ ಕೆಲಸಗಳ ಬಗ್ಗೆ ತಿಳಿದುಕೊಳ್ಳಲೇಬೇಕು. ವೈಯಕ್ತಿಕ ಮಾಹಿತಿಗಳನ್ನು ನೀಡುವಾಗ  ಯಾವ ರೀತಿಯಲ್ಲಿ ಗುಪ್ತತೆಯನ್ನು ಕಾಯ್ದಿರಿಸಲಾಗುತ್ತದೆ ಎಂಬುದನ್ನು ಪರಿಶೀಲಿಸಿ ಮುಂದುವರಿಯುವುದು ಒಳಿತು.

ಈ ಲೇಖನವನ್ನು ಸ್ವ ಅಧ್ಯಯನದ ಮೂಲಕ ಬರೆಯಲಾಗಿದೆ. ಯಾವುದೇ ವೆಬ್ ಸೈಟ್ ಅಥವಾ ಇನ್ನಾವುದೇ ಉತ್ಪನ್ನಗಳೊಂದಿಗೆ ಪ್ರಾಯೋಜಿತಗೊಂಡಿಲ್ಲ. 

ಚೈತ್ರ ಎಲ್ ಹೆಗಡೆ

Read Previous

ಪುಸ್ತಕ ಭಂಡಾರ

Read Next

ಸೋಷಿಯಲ್ ಮಿಡಿಯಾ ಎಂಬ ಮಾಯಾಜಾಲ!

Most Popular