ಫ್ರೀಲಾನ್ಸಿಂಗ್ ಆರಂಭಿಸುವ ಮುನ್ನ ಏನೆಲ್ಲಾ ಯೋಚಿಸಬೇಕು?

ಫ್ರೀಲಾನ್ಸಿಂಗ್ ಒಂದು ಯುದ್ಧದ ಕುದುರೆ ಇದ್ದಂತೆ. ಅದನ್ನು ಕಟ್ಟಿ ಹಾಕುವುದು ಅಷ್ಟು ಸುಲಭವಲ್ಲ. ಫ್ರೀಲಾನ್ಸಿಂಗ್ ಆರಂಭಿಸುವ ಮುನ್ನ ಅದರ ಒಳ-ಹೊರಗಿನ ವಿಷಯಗಳನ್ನು ಕೂಲಂಕುಶವಾಗಿ ತಿಳಿದುಕೊಂಡರೆ ಮಾತ್ರ ಯಶಸ್ಸು ಸಿಗುತ್ತದೆ. ಸ್ವ ಉದ್ಯೋಗದಿಂದ ಆಗುವ ಲಾಭದಷ್ಟೇ ಸವಾಲುಗಳು ಎದುರಾಗುತ್ತವೆ. ಸ್ವ ಉದ್ಯೋಗ ಆರಂಭಿಸುವುದಕ್ಕೂ ಮುನ್ನ ಈ  ಎಲ್ಲ ಸವಾಲುಗಳನ್ನು ತಿಳಿದುಕೊಂಡರೆ ಉತ್ತಮ. ಇದರಿಂದ ಸ್ವ ಉದ್ಯೋಗ ಆರಂಭಿಸಿದಾಗ ಎದುರಾಗುವ ಸಮಸ್ಯೆಗಳನ್ನು ಸುಲಭವಾಗಿ ಎದುರಿಸಬಹುದು. 

ತಿಳಿದಿರಲೇಬೇಕಾದ ಅಂಶಗಳು

  • ಆರಂಭಕ್ಕೂ ಮುನ್ನ ಅದೆಷ್ಟು ವಿಘ್ನಗಳು: ಸ್ವ ಉದ್ಯೋಗವನ್ನು ಆರಂಭಿಸುವುದಕ್ಕೂ ಮುನ್ನ ಹಲವು ವಿಘ್ನಗಳು ಎದುರಾಗುತ್ತವೆ. ಅಂದರ ಮೊದಲ ಪ್ರೊಜೆಕ್ಟ್ ಕೈಗೆ ಸಿಗುವುದಕ್ಕೂ ಮುನ್ನ ಹಲವು ತಿರಸ್ಕಾರಗಳನ್ನು ಎದುರಿಸಬೇಕಾಗುತ್ತದೆ. ನಂಬಿಕೆ ಗಳಿಸುವುದಕ್ಕೆ ಮೊದಲ ಪ್ರೊಜೆಕ್ಟ್ ಕೈಗೆ ಸಿಗಲೇ ಬೇಕು. ಕೆಲವೊಮ್ಮೆ ಮೊದಲ ಕೆಲಸ ಲಭಿಸುವುದಕ್ಕೆ ಆರು ತಿಂಗಳನಿಂದ ಒಂದು ವರ್ಷದ ವರೆಗೂ ಕಾಯುವ ಪರಿಸ್ಥಿತಿ ಬರಬಹುದು. 
  • ಮೋಸ ಹೋಗುವ ಸಾಧ್ಯತೆ: ಕೆಲ ಕಂಪನಿಗಳು ಉತ್ತಮವಾಗಿ ಹಣ ಸಂಧಾಯ ಮಾಡುತ್ತಿದೆಯೋ ಅಥವಾ ಕೆಲಸ ತೆಗೆದುಕೊಂಡು ಮೋಸ ಮಾಡುತ್ತಿದೆಯೋ ಎಂಬ ಅಂಶವನ್ನು ಸರಿಯಾಗಿ ತಿಳಿದುಕೊಂಡೇ ಕೆಲಸ ಮಾಡಬೇಕಾಗುತ್ತದೆ. ಕೆಲವೊಮ್ಮೆ ಕಂಪನಿಗಳ ಪೂರ್ವಾಪರ ತಿಳಿಯದೇ ಕೆಲಸ ಮಾಡಿದರೆ, ಮೋಸ ಹೋಗಬಹುದು. ಇನ್ನು ಕೆಲವು ಕಂಪನಿಗಳು ಹಣ ನೀಡುವ ಮೊದಲೇ ದಿವಾಳಿಯಾಗಬಹುದು. ಅಥವಾ ಮಾಡಿದ ಕೆಲಸ ತೃಪ್ತಿಕರವಾಗಿಲ್ಲ ಎಂಬ ಸಬೂಬು ಹೇಳಿ ಹಣ ನೀಡದೆಯೂ ಇರಬಹುದು. 
  • ಕೆಲಸ ಸಿಗದೇ ಇರಬಹುದು: ಸ್ವ ಉದ್ಯೋಗದಲ್ಲಿ ಬೇಕಾದಾಗೆಲ್ಲ ಕೆಲಸ ಸಿಕ್ಕೇ ಬಿಡುತ್ತದೆ ಎನ್ನುವ ಹಾಗಿಲ್ಲ. ಒಮ್ಮೊಮ್ಮೆ ಒಂದು ತಿಂಗಳಿನಿಂದ ಹಿಡಿದು ಆರು ತಿಂಗಳುವರೆಗೂ ಕೆಲಸವಿಲ್ಲದೇ ಕುಳಿತುಕೊಳ್ಳುವ ಪರಿಸ್ಥಿತಿ ಬರಬಹುದು. ಅವಶ್ಯ ಅನುಭವ ಹೊಂದಿದ ಬಳಿಕವೂ ಕೆಲಸ ಸಿಗದೇ ಕಾಯುವ ಪರಿಸ್ಥಿತಿ ಬರಬಹುದು.  
  • ನಿರಂತರ ಹುಡುಕಾಟ: ಪ್ರತಿ ಪ್ರೊಜೆಕ್ಟ್ ಮುಗಿದಾಗ ಮತ್ತೊಂದು ಕ್ಲೈಂಟ್ ಎದುರು ನೋಡುತ್ತಿರುವುದಿಲ್ಲ. ಒಂದು ಕೆಲಸ ಮುಗಿಯುತ್ತಿದ್ದಂತೆ ಇನ್ನೊಂದು ಕೆಲಸ ಎಲ್ಲಿ ಸಿಗುತ್ತದೆ ಎಂಬ ಮಾಹಿತಿ ತಿಳಿದಿರಬೇಕು. ಅಥವಾ ಹುಡುಕುವ ಕ್ಷಮತೆ ಇರಬಹುದು. ಈ ಹಿನ್ನಲೆಯಲ್ಲಿ ನಿರಂತರ ಹುಡುಕಾಟ ನಡೆಯುತ್ತಿರಬೇಕು.
  • ಗ್ರಾಹಕರನ್ನು ನಿಭಾಯಿಸುವ ಕ್ಷಮತೆ: ಪ್ರತಿ ಬಾರಿ ಕೆಲಸ ಲಭಿಸಿದಾಗಲೂ, ಅವುಗಳನ್ನು ಕೈಗಿರಿಸಿದ ಕಂಪನಿಗಳ ಮಾಲೀಕರನ್ನು ನಿಭಾಯಿಸುವ ಶಕ್ತಿ ಇರಬೇಕು. ಅವರ ಆಸಕ್ತಿಗಳೇನು, ಅವರು ಯಾವ ರೀತಿಯಲ್ಲಿ ಫಲಿತಾಂಶವನ್ನು ಎದುರು ನೋಡುತ್ತಿದ್ದಾರೆ ಎಂಬೆಲ್ಲ ಮಾಹಿತಿ ಪಡೆದು, ಅವರಿಗೆ ತಕ್ಕಂತೆ ತೃಪ್ತಿದಾಯಕ ಕೆಲಸ ನಿರ್ವಹಿಸಬೇಕಾಗುತ್ತದೆ.
  • ಕೆಲಸ ಮುಂದೂಡುವಂತಿಲ್ಲ: ಒಂದು ಕೆಲಸ ಲಭಿಸಿದ ಬಳಿಕ ಅದನ್ನು ಮಾಡಲಾಗದೇ ನಾಳೆಗೆ ಮುಂದೂಡುವಂತಿಲ್ಲ. ವೈಯಕ್ತಿಕ ಕೆಲಸವಿದೆಯೆಂದು ಇದ್ದ ಕೆಲಸವನ್ನು ಬದಿಗೊತ್ತುವಂತಿಲ್ಲ. ತೆಗೆದುಕೊಂಡು ಕೆಲಸವನ್ನು ಮಾಡಿಮುಗಿಸಲೇಬೇಕು. 
  • ಮತ್ತೊಬ್ಬರ ಹೆಗಲು ಸಿಗುವುದಿಲ್ಲ: ಕಂಪನಿಗಳಲ್ಲಿ ಉದ್ಯೋಗಿಗಳಾಗಿ ಕೆಲಸ ಮಾಡುತ್ತಿದ್ದರೆ ಅಲ್ಲಿ ಸಹೋದ್ಯೋಗಿಗಳ ಸಹಕಾರ ಮತ್ತು ಸಹಾಯ ಸದಾ ಸಿಗುತ್ತಿರುತ್ತದೆ. ಆದರೆ, ಸ್ವ ಉದ್ಯೋಗ ಮಾಡುತ್ತಿದ್ದರೆ ಸಹಕಾರ ಬೇಕೆಂದಾಗ ಲಭಿಸುವುದಿಲ್ಲ. 
  • ಸಮಯ ನಿರ್ವಹಣೆ: ಸಿಕ್ಕ ಕೆಲಸವನ್ನು ನಿಗದಿತ ಸಮಯದೊಳಗಾಗಿ ಮಾಡಿ ಮುಗಿಸಲೇಬೇಕಾಗುತ್ತದೆ. ಇಲ್ಲದಿದ್ದಲ್ಲಿ ಮುಂದೆ ಆ ಗ್ರಾಹಕನನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಕೆಲವೊಮ್ಮೆ ಹೆಚ್ಚುವರಿ ಸಮಯ ಪಡೆಯಬಹುದಾದರೂ, ಸಮಯದಲ್ಲಿ ಕೆಲಸ ಮುಗಿಸುವ ಹಾಗೂ ಸ್ವಂತ ಸಮಯವನ್ನು ನಿರ್ವಹಿಸುವ ಕ್ಷಮತೆ ಇರಲೇಬೇಕು.

ಸ್ವ ಉದ್ಯೋಗದಲ್ಲಿ ಲಾಭದಷ್ಟೇ ಸವಾಲುಗಳು ಇರುತ್ತವೆ. ಈ ಸವಾಲುಗಳೆಲ್ಲ ಹೊಸತೇನಲ್ಲ. ಜೀವನದ ಪ್ರತಿ ಹೆಜ್ಜೆಯಲ್ಲೂ ಇದು ಎದುರಾಗುತ್ತಿರುತ್ತದೆ. ಆದರೆ, ಅವುಗಳನ್ನು ನಿಭಾಯಿಸುವ ಚಾಕಚಕ್ಯತೆ ಇರಬೇಕು.  ಪ್ರತಿ ಬಾರಿ ತಪ್ಪು ಮಾಡಿದಾಗಲೂ ಅದನ್ನು ಸರಿ ಪಡಿಸಿಕೊಂಡು ಮುಂದೆ ಇದೇ ರೀತಿ ಆಗದಂತೆ ನೋಡಿಕೊಳ್ಳುವ ಜಾಣ್ಮೆ ಹೊಂದಬೇಕು.

ಕೊನೆಸಾಲು

ಸ್ವ ಉದ್ಯೋಗದಲ್ಲಿ ವಿಶ್ವಾಸಾರ್ಹತೆ ಗಳಿಸಲು ಸಾಕಷ್ಟು ಸಮಯ ಹಿಡಿಯುತ್ತದೆ. ಗಳಿಸಿದ ನಂಬಿಕೆಯನ್ನು ಉಳಿಸಿಕೊಳ್ಳಲು ಅಷ್ಟೇ ತಾಳ್ಮೆ ಬೇಕಾಗುತ್ತದೆ. ನಮ್ಮಲ್ಲಿ ನಾವು ನಂಬಿಕೆ ಇಟ್ಟು ಮುನ್ನುಗ್ಗಿದರೆ, ಯಾವುದೇ ಸಮಸ್ಯೆಗಳನ್ನು ಸುಲಭವಾಗಿ ನಿಭಾಯಿಸಬಹುದು. ಹೊರಟ ದಾರಿಯಲ್ಲಿ ಮುನ್ನುಗ್ಗಿ ಹಿಡಿದ ಕೆಲಸ ಸಾಧಿಸಬಹುದು.

ಚೈತ್ರ ಎಲ್ ಹೆಗಡೆ

Read Previous

ರಿಪಬ್ಲಿಕ್ ಆಫ್ ಕುಗೆಲ್ ಮುಗೆಲ್

Read Next

ಗ್ರಾಹಕರ ಖಾಸಗಿತನಕ್ಕೆ ಕನ್ನ ಹಾಕುತ್ತಿರುವ ತಂತ್ರಜ್ಞಾನ!

Most Popular