ತಾಯ್ತನ ಎದುರುಗೊಳ್ಳುವ ಮೊದಲು ಈ ಎಲ್ಲ ವಿಚಾರಗಳು ನಿಮಗೆ ತಿಳಿದಿತ್ತೇ?

ಮದುವೆಯಾದಾಗ ಪ್ರತಿ ತಾಯಯೂ ತನ್ನ ಮಗಳಿಗೆ ಮಗುವಿನ ಕನಸು ಬಿತ್ತುತ್ತಾಳೆ. ಇದಕ್ಕೆ ಸುತ್ತಮುತ್ತಲಿರುವ ನೆಂಟರಿಷ್ಟರು ಹಾಗೂ ಗೆಳತಿಯರು ಅದಕ್ಕೆ ಇನ್ನೊಂದಿಷ್ಟು ನೀರು ಗೊಬ್ಬರ ಹಾಕಿ ಅದನ್ನು ಹೆಮ್ಮರವಾಗಲು ಬಿಡುತ್ತಾರೆ. ಸಾಲದೆಂಬಂತೆ ಮದುವೆಯಾದ ತಕ್ಷಣ ಜೀವನದ ಏಕೈಕ ಗುರಿ ಎಂದರೆ ಮಗು ಹೊಂದುವುದು ಎಂದೇ ಬಿಂಬಿಸಲಾಗುತ್ತದೆ. 

ಪ್ರಿಯಾ ಮದುವೆಯಾಗಿ ಒಂದು ವರ್ಷ. ಹೊಸ ಮನೆಗೆ ಹೊಂದಿಕೊಳ್ಳಲು ಹೆಣಗಾಡುತ್ತಿದ್ದಳು. ಅಷ್ಟರಲ್ಲಾಗಲೇ ಹೊಸ ಸುದ್ದಿ ನೀಡಿದಳು. ಮನೆಯಲ್ಲೆಲ್ಲ ಸಂಭ್ರಮವೋ ಸಂಭ್ರಮ. ಆದರೆ ಆಗಿದ್ದು ಬೇರೆಯದೇ ಕಥೆ. ಮೂರು ತಿಂಗಳು ತುಂಬುವುದಕ್ಕೂ ಮುನ್ನವೇ ಪ್ರಿಯಾಳಿಗೆ ವೈದ್ಯರು ಬೆಡ್ ರೆಸ್ಟ್ ಹೇಳಿ ಬಿಟ್ಟರು. ಇದರಿಂದ ಅನಿವಾರ್ಯವಾಗಿ ಹಾಸಿಗೆ ಬಿಟ್ಟು ಮೇಲೇಳದ ಪರಿಸ್ಥಿತಿ. ಗಂಡನ ಮನೆಯಲ್ಲಿದ್ದುಕೊಂಡು ಸದಾ ಮಲಗಿರಲು ಸಾಧ್ಯವೇ! ನೋಡಿದವರು ಏನಂದುಕೊಂಡಾರು! ಇದರಿಂದ ಗಂಡನ ಮನೆಯಲ್ಲಿ ಒಗ್ಗಿಕೊಳ್ಳುವ ಮುನ್ನವೇ ಅಮ್ಮನ ಮನೆಗೆ ಹಿಂದಿರುಗಿದ್ದಳು. ಚಲನಚಿತ್ರಗಳಲ್ಲಿ ಗರ್ಭಿಣಿಯರನ್ನು ಅದೆಷ್ಟು ಸುಂದರವಾಗಿ ತೋರಿಸುತ್ತಾರೆ. ಆದರೆ ನನ್ನ ಬದುಕು ಮಾತ್ರ ಹೀಗೇಕೆ ಎಂದು ಅಲವತ್ತುಕೊಳ್ಳತೊಡಗಿದಳು ಪ್ರಿಯಾ. 

ಇನ್ನು ಮಾನಸಾಳ ಕಥೆ ಬೇರೆಯದೇ ಇದೆ. ಅವಳದು ಸುಂದರ ಸಂಸಾರ. ಗಂಡ ಹೆಂಡತಿ ಇಬ್ಬರು ಕೈತುಂಬ ಸಂಬಳ ತರುತ್ತಾರೆ. ಆದರೆ ಅದಕ್ಕೆ ತಕ್ಕಂತೆ ಹೊಸ ಮನೆ, ನೆಚ್ಚಿನ ಕಾರು ಹೀಗೆ ತಿಂಗಳಾಂತ್ಯಕ್ಕೆ ಹತ್ತಾರು ಇಎಂಐ ತುಂಬಲೇ ಬೇಕಾಗುತ್ತದೆ. ಆದರೆ, ಅವಳ ಆಪ್ತರು ಹೇಳುವಂತೆ ಮೂವತ್ತು ವರ್ಷ ಆಗುವುದರ ಒಳಗೆ ಮಗು ಕೈಯಲ್ಲಿರಬೇಕು ಎಂಬುದು ಅವಳ ನಿರ್ಧಾರವಾಗಿತ್ತು. ಅದೊಂದೇ ಕಾರಣಕ್ಕೆ ಗರ್ಭಿಣಿಯಾದ ಮಾನಸಾ ಕೆಲಸ ಹಾಗೂ ಮಾನಸಿಕ ಒತ್ತಡಗಳನ್ನು ನಿಭಾಯಿಸಲಾರದೇ ಸೋತು ಹೋಗಿದ್ದಳು. ಮಗು ಕೈಗೆ ಬರುವ ಮುನ್ನವೇ ತಾಯ್ತನವನ್ನು ತನ್ನಿಂದ ನಿಭಾಯಿಸಲು ಸಾಧ್ಯವೇ ಎಂದು ಭೀತಿ ಆರಂಭವಾಗಿತ್ತು.

ಹೌದಲ್ವೇ! ನಾವು ಮದುವೆಯಾದಾಗ ಎಲ್ಲರೂ ಹೊಸ ಸುದ್ದಿ ಯಾವಾಗ ನೀಡುತ್ತೇವೆ ಎಂಬುದೇ ಬಹುತೇಕರ ಮೊದಲ ಪ್ರಶ್ನೆ ಆಗಿರುತ್ತದೆ. ಇನ್ನು ಕೆಲವರ ಹಿತನುಡಿಯೂ ಅದರ ಮೇಲೆ ಅವಲಂಭಿತವಾಗಿರುತ್ತದೆ. ಆದರೆ, ಅವರಲ್ಲಿ ಒಬ್ಬರಾದರೂ ಕುಟುಂಬ ವಿಸ್ತರಣೆ ನಿರ್ಧರಿಸುವ ಮುನ್ನ ಎನೆಲ್ಲ ಬದಲಾವಣೆಗಳು ಆಗುತ್ತದೆ ಎಂಬುದನ್ನು ಯಾರಾದರೂ ಹೇಳಿರುತ್ತಾರಾ! ಹೋಗಲಿ ಯಾರಾದರೂ ತಮಗಾದ ಅನುಭವವನ್ನು ಯಾವುದೇ ಮುಜುಗರವಿಲ್ಲದೇ ಹಂಚಿ ಕೊಂಡಿರುತ್ತಾರೆಯೇ! ಅದು ಬೇಡ ಏನೇನು ಬದಲಾವಣೆಗಳಾಗ ಬಹುದು ಎಂಬ ಸಣ್ಣ ಸುಳಿವನ್ನು ನೀಡಿರುತ್ತಾರೆಯೇ! ಯಾರೂ ಮಾಡುವುದಿಲ್ಲ. 

ಗರ್ಭಧಾರಣೆಯಾದ ಸಂದರ್ಭದಲ್ಲಿ ತಾಯಿಯಲ್ಲಿ ಆಗುವ ಬದಲಾವಣೆಗಳು

 • ಸಂಗಾತಿಯಿಂದ ದೂರವಿರಬೇಕಾಗುವ ಸಾಧ್ಯತೆ: ಸಾಮಾನ್ಯವಾಗಿ ಗರ್ಭಧರಿಸಿದ ಬಳಿಕ ಹೆಣ್ಣುಮಕ್ಕಳು ತಾಯಿಯ ಮನೆಗೆ ತೆರಳುತ್ತಾರೆ. ಅದರಲ್ಲೂ ಮೊದಲ ಮಗುವಾಗಿದ್ದರೆ ತವರಿನಲ್ಲೇ ಹೆರಿಗೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇದರಿಂದಾಗಿ ಸಂಗಾತಿಯೊಂದಿಗೆ ದೂರ ಇರಬೇಕಾದ ಸಂದರ್ಭ ಬರಬಹುದು. ಮನಸು ಬೆರೆಯುವ ಸಂದರ್ಭದಲ್ಲಿ ದೂರವಾಗುವ ಪರಿಸ್ಥಿತಿ ಬರಬಹುದು. ಈ ಸಂದರ್ಭದಲ್ಲಿ ಒಂಟಿತನ ಕಾಡಲೂ ಬಹುದು. 
 • ಆಕಸ್ಮಿಕ ದೈಹಿಕ ಸಮಸ್ಯೆಗಳು: ಗರ್ಭ ಧಾರಣೆಯ ಸಂದರ್ಭದಲ್ಲಿ ಸಾಂದರ್ಭಿಕ ಸಕ್ಕರೆ ಕಾಯಿಲೆ, ರಕ್ತದೊತ್ತಡ ಸೇರಿದಂತೆ ಅನೇಕ ಸಮಸ್ಯೆಗಳು ಎದುರಾಗಬಹುದು. ಕೆಲವು ಸಮಸ್ಯೆಗಳು ಶಾಶ್ವತವಾಗಿ ನಮ್ಮೊಂದಿಗೆ ಉಳಿಯಬಹುದು. ಇನ್ನು ಕೆಲವು ಸಮಸ್ಯೆಗಳು ಹೆರಿಗೆಯ ನಂತರ ನಿವಾರಣೆಯಾಗಬಹುದು.
 • ಮಾನಸಿಕ ಒತ್ತಡಗಳು: ಹಾರ್ಮೋನ್ ಏರಿಳಿತ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಗುವ ಸಾಧ್ಯತೆಗಳಿರುತ್ತವೆ. ಕಾರಣವಿಲ್ಲದೇ ಅಳು ಬರಬಹುದು. ಕಾರಣವಿಲ್ಲದೇ ಸಂಭ್ರಮಿಸಲೂ ಬಹುದು. ಸಂಗಾತಿಯೊಂದಿಗೆ ಜಗಳಕ್ಕಿಳಿಯಬಹುದು. ಈ ಬದಲಾವಣೆ ಕಣ್ಣಿಗೆ ಕಾಣದಿದ್ದರೂ ಗಾಢ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ. ಈ ಸಮಸ್ಯೆ ಹೆರಿಗೆಯ ನಂತರವೂ ಕಾಣಿಸಿಕೊಳ್ಳಬಹುದು. ಹಲವರಿಗೆ ಕೆಲವೇ ದಿನಗಳ ಮಟ್ಟಿಗೆ ಈ ಸಮಸ್ಯೆ ಕಾಣಿಸಿಕೊಳ್ಳಬಹುದು. ಇನ್ನು ಕೆಲವರಿಗೆ ಸದಾಕಾಲ ಮಾನಸಿಕ ಒತ್ತಡಗಳು ಎದುರಾಗಬಹುದು.
 • ಆಹಾರದಲ್ಲಿ ವ್ಯತ್ಯಯ: ಆಹಾರ ಸೇವನೆಯಲ್ಲಿ ಸಂಪೂರ್ಣವಾಗಿ ಬದಲಾವಣೆ ಆಗಬಹುದು. ಇಷ್ಟದ ಆಹಾರಗಳು ಪಚನವಾಗಲು ಕಷ್ಟವಾಗಿ, ಹೊಸ ಆಹಾರ ಪದ್ಧತಿ ಅಳವಡಿಸಿಕೊಳ್ಳುವ ಪರಿಸ್ಥಿತಿಯೂ ಬರಬಹುದು.
 • ನಿದ್ರೆಯಿಲ್ಲದ ರಾತ್ರಿಗಳು: ಹಾರ್ಮೋನಿನಲ್ಲಿ ಏರಿಳಿತ, ಆಹಾರದಲ್ಲಿ ಹೆಚ್ಚುಕಮ್ಮಿಯಾಗಿ ಅಥವಾ ಹಲವು ಕಾರಣಗಳಿಗೆ ರಾತ್ರಿಯಿಡಿ ನಿದ್ರೆ ಗೆಡುವ ಸಂದರ್ಭದಗಳು ಎದುರಾಗುತ್ತದೆ. ಇದರಿಂದ ದಿನನಿತ್ಯತ ಚಟುವಟಿಕೆಗಳಿಗೆ ಸಮಸ್ಯೆ ಉಂಟಾಗಬಹುದು.
 • ಇತರ ಸಮಸ್ಯೆಗಳು: ಮೇಲಿನ ಕಾರಣಗಳಲ್ಲದೇ ಇನ್ನು ಅನೇಕ ಸಮಸ್ಯೆಗಳು ಎದುರಾಗಬಹುದು. ಪ್ರತಿಯೊಬ್ಬರ ದೇಹ ಪ್ರಕೃತಿಯ ಮೇಲೆ ಅವಲಂಭಿತವಾಗಿರುತ್ತದೆ.

ಓಹೋ!!! ಇಷ್ಟೊಂದು ಸಮಸ್ಯೆಗಳಾದರೆ ಮಕ್ಕಳ ಬೇಡ ಎನ್ನಲಾಗುತ್ತದೆಯೇ! ಖಂಡಿತ ಇಲ್ಲ. ಈ ಎಲ್ಲ ಮಾಹಿತಿಯನ್ನು ನೀಡಿರುವುದಕ್ಕೆ ಕಾರಣ ಇಷ್ಟೆ. ಅದೆಷ್ಟೋ ಸಮಸ್ಯೆಗಳನ್ನು ಆಯಾ ಸಂದರ್ಭಗಳಲ್ಲಿ ಕಡೆಗಣಿಸಲಾಗುತ್ತದೆ. ಇದು ಒಂದು ಸಮಸ್ಯೆಯೇ ಅಲ್ಲ ಎಂದು ಬಿಟ್ಟು ಬಿಡುತ್ತೇವೆ. ಆದರೆ, ತಕ್ಷಣ ಎಚ್ಚೆತ್ತುಕೊಂಡರೆ ಪರಿಹಾರ ಹುಡುಕಬಹುದು. ಅದೆಷ್ಟೋ ಸಮಸ್ಯೆಗಳು ಉಲ್ಭಣಗೊಳ್ಳುವುದಿಲ್ಲ. ಪರಿಸ್ಥಿತಿ ಕೈ ಮೀರುವುದು ಇಲ್ಲ. ಇನ್ನು ಕೆಲವು ಸಮಸ್ಯೆಗಳಿಗೆ ಮಾನಸಿಕವಾಗಿ ಸಿದ್ಧವಿದ್ದರೆ ಎದುರಿಸುವುದು ಸುಲಭ. ಇಲ್ಲವಾದಲ್ಲಿ ಕೊನೆಯ ಕ್ಷಣಕ್ಕೆ ಏನು ಮಾಡಬೇಕು ಎಂದು ತಿಳಿಯದೇ ಹೈರಾಣಾಗುವ ಸಾಧ್ಯತೆ ಇರುತ್ತದೆ. ಜೊತೆಗೆ ಸರಿಯಾದ ಪರಿಹಾರ ದೊರಕದೆ ಜೀವನಪರ್ಯಂತ ಅನುಭವಿಸುವ ಪರಿಸ್ಥಿತಿ ಬರುತ್ತದೆ.  

ಅದೆಷ್ಟೋ ಮಹಿಳೆಯರು ತಮ್ಮ ಮನಸಿನ ಮಾತು ಕೇಳುವುದಕ್ಕೂ ಮುನ್ನ ಸಮಾಜದ ಒತ್ತಡಕ್ಕೆ ಒಳಗಾಗುತ್ತಾರೆ. ವಯಸ್ಸಾಗಿದೆ, ಮುದವೆಯಾಗಿ ಎರಡು ವರ್ಷವಾಯಿತು, ಅತ್ತೆ ಮನೆಯ ಕಡೆಯಿಂದ ಒತ್ತಡ ಬರುತ್ತಿದೆ, ಗೆಳತಿಯರಿಗೆಲ್ಲ ಮಕ್ಕಳಾಗಿದೆ ಎಂಬೆಲ್ಲ ಕಾರಣಗಳು ಎದುರಾಗುತ್ತದೆ. ಆದರೆ, ಈ ಕಾರಣಗಳು ಅದೆಷ್ಟು ಸಮಂಜಸ ಎಂಬುದು ಪ್ರಶ್ನಾತೀತ.

ತಾಯ್ತನಕ್ಕೆ ಮುಂದಾಗುವ ಮುನ್ನ ಉತ್ತರಿಸಬೇಕಾದ ಪ್ರಶ್ನೆಗಳಿವು.

 • ಒಂದು ಮಗುವಿನ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಸಾಮರ್ಥ್ಯ ಬಂದಿದೆಯೇ? 
 • ಮಗುವಿನ ಅಗತ್ಯಕ್ಕೆ ತಕ್ಕಂತೆ ಸಮಯ ಮೀಸಲಿಡುವುದು ಸಾಧ್ಯವೇ?
 • ದೈಹಿಕ ಬದಲಾವಣೆಗೆ ಸಿದ್ಧರಿದ್ದೇವೆಯೇ?
 • ಆರೋಗ್ಯ ಸಮಸ್ಯೆ ಉಂಟಾದಲ್ಲಿ ಉದ್ಯೋಗದಿಂದ ದೂರವಿರುವುದು ಸಾಧ್ಯವೇ?
 • ಮಗುವಿಗೆ ಅಗತ್ಯವಿರುವ ಆರ್ಥಿಕ ವ್ಯವಸ್ಥೆ ನಮ್ಮಲ್ಲಿದೆಯೇ?
 • ಮಗುವಿನ ಆರೈಕೆ ಮಾಡಲು ಮಾನಸಿಕ ಸಿದ್ಧತೆ ನಡೆದಿದೆಯೇ?
 • ಸಮಾಜಕ್ಕೆ ಹೆದರಿ ನಿರ್ಧಾರ ಮಾಡುತ್ತಿದ್ದೇವೆಯೇ?
 • ಇನ್ನೂ ಸ್ವಲ್ಪ ಕಾಯುವ ಅವಶ್ಯಕತೆ ಇದೆಯೇ?

ಈ ಎಲ್ಲ ಪ್ರಶ್ನೆಗಳಿಗೆ ಬಹುತೇಕ ಸಕಾರಾತ್ಮಕವಾಗಿ ಉತ್ತರ ಬಂದರೆ ಖಂಡಿತ ಕಂದಮ್ಮನ ಸ್ವಾಗತಕ್ಕೆ ಸಿದ್ಧತೆ ನಡೆಸಬಹುದು. ಇಲ್ಲವಾದಲ್ಲಿ ಸಂಗಾತಿಯೊಂದಿಗೆ ಕೆಲ ಸಮಯ ಕಳೆದು, ಮನಸುಗಳು ಬೆರತ ನಂತರ ನಿರ್ಧಾರ ತೆಗೆದುಕೊಳ್ಳಬಹುದು. ಇವೆಲ್ಲದರ ಹೊರತಾಗಿ ಪ್ರತಿಯೊಬ್ಬರ ಬಾಳಲ್ಲೂ ಆದ್ಯತೆಗಳು ಬೇರೆಯಾಗಿರುತ್ತದೆ. ಅವರವರ ಆದ್ಯತೆ, ಅವಶ್ಯಕತೆ ಹಾಗೂ ನಿರೀಕ್ಷೆಗಳಿಗೆ ತಕ್ಕಂತೆ ಮನಸಿನ ತಯಾರಿ ನಡೆಸಬಹುದು.

ಕೊನೆಯ ಸಾಲು

ಪ್ರತಿ ಬಾರಿ ಏದುರಾದಾಗಲೂ “ಇನ್ನು ಮಕ್ಕಳಾಗಿಲ್ಲವೇ?” ಎಂದು ಪ್ರಶ್ನಿಸುವರಾರು ಬಂದು ನಮ್ಮ ಮಕ್ಕಳಿಗೆ ಸಹಾಯ ಮಾಡುವುದಿಲ್ಲ. ನಮ್ಮ ಯಾವ ಜವಾಬ್ದಾರಿಗೂ ಹೆಗಲು ಕೊಡುವುದಿಲ್ಲ. ಹಾಗಾಗಿ ಸಮಾಜದ ಒತ್ತಡ ಹಾಗೂ ಇತರ ಕಾರಣಗಳನ್ನು ಬದಿಗಿರಿಸಿ ಮುಕ್ತ ಮನಸಿನಿಂದ ನಿರ್ಧಾರ ತೆಗೆದುಕೊಳ್ಳುವುದು ಒಳಿತು.

 

ಚೈತ್ರ ಎಲ್ ಹೆಗಡೆ

Read Previous

ಬಸ್ ಟಿಕೆಟ್ – BusTicket

Read Next

ರಿಪಬ್ಲಿಕ್ ಆಫ್ ಕುಗೆಲ್ ಮುಗೆಲ್

Most Popular