ಸೋಷಿಯಲ್ ಮಿಡಿಯಾ ಎಂಬ ಮಾಯಾಜಾಲ!

ಸದಾ ನಗು ಮುಖ, ಬಿಸಿ ಬಿಸಿಯಾದ ಅಡುಗೆಗಳು, ಹೊಸ ಹೊಸ ತಾಣಗಳು ಹೀಗೆ ಹಲವರ ಬಣ್ಣದ ಬದುಕು ಸೋಷಿಯಲ್ ಮಿಡಿಯಾದಲ್ಲಿ ಕಾಣಸಿಗುತ್ತವೆ. ಫೇಸ್‌ಬುಕ್ ಪೇಜಿನಲ್ಲಿ ನೆಂಟರಿಷ್ಟರ ಸಡಗರ ಫೋಟೋಗಳು ರಾರಾಜಿಸುತ್ತಿರುತ್ತವೆ, ಇನ್‌ಸ್ಟಾಗ್ರಾಮ್‌ನಲ್ಲಿ ಸ್ನೇಹಿತೆಯರ ಯುರೋಪ್ ಟ್ರಿಪ್ ಫೋಟೋಗಳು, ಬೆಳ್ಳಂಬೆಳಗ್ಗೆ ಟ್ವಿಟರ್ ತೆಗೆದರೆ ಡೆಲ್ಗೊನಾ ಕಾಫೀ ಟ್ರೆಂಡಿಂಗ್ ಆಗಿರುತ್ತದೆ. ಇವುಗಳನ್ನು ನೋಡಿದರೆ, ಆಹಾ!!! ಬದುಕೇ ನಿನೆಷ್ಟು ಸುಂದರ ಎನ್ನಬಹುದು!

ಆದರೆ ನಿಜಕ್ಕೂ ಹಾಗಿರುತ್ತದೆಯೇ? ನಿಜ ಬದುಕು ಅಷ್ಟು ಸುಂದರವೇ? ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನಲ್ಲಿ ಅಥವಾ ಇನ್ನಾವುದೇ ಸೋಷಿಯಲ್ ಮೀಡಿಯಾದಲ್ಲಿ ಕಾಣುವ ಫೋಟೋಗಳಂತೆ ಬದುಕು ಬಣ್ಣದಿಂದ ಕೂಡಿರುತ್ತದೆಯೇ? ಸೋಷಿಯಲ್ ಮೀಡಿಯಾದಲ್ಲಿ ಇಣುಕಿದಾಗಲೆಲ್ಲ ಮಿಕ್ಕೆಲ್ಲರ ಬದುಕು ಅತ್ಯಂತ ಸುಂದರವಾಗಿದ್ದು, ತಮ್ಮ ಬದುಕು ಮಾತ್ರ ಬಣ್ಣ ಕಳೆದುಕೊಂಡಿದೆ ಎಂದು ಒಮ್ಮೆಯಾದರೂ ಅನಿಸದೇ ಇರದು.  

ಪ್ರತಿ ಫೋಟೋ ಹಿಂದೆಯೂ ಒಂದಲ್ಲ ಒಂದು ಕಥೆ ಇರುತ್ತದೆ. ಕೆಲವು ಕಥೆಗಳನ್ನು ಕಟ್ಟಲಾಗುತ್ತದೆ. ಇನ್ನು ಕೆಲವು ಕಥೆಗಳನ್ನು ಹೇಳಲಾಗುತ್ತದೆ. ಇದೇ ಸೋಷಿಯಲ್ ಮಿಡಿಯಾದಲ್ಲಿರುವುದು. ಇದನ್ನು ಅರಿಯದ ಮುಗ್ಧ ಮನಸುಗಳು ನೋಡಿ ತಮ್ಮ ಬದುಕಿನಲ್ಲೂ ಆ ಸುಂದರ ಕ್ಷಣಗಳಿಗಾಗಿ ಕಾದು ಕುಳಿತಿರುತ್ತಾರೆ.  

ಫೋಟೋಗಳ ಹಿಂದಿರುವ ನಿಜವಾದ ನಂಟು

ಸುಜಾತ ಅಪರೂಪಕ್ಕೆ ಬೆಂಗಳೂರಿನಿಂದ ತನ್ನೂರಿಗೆ ತೆರಳಿದ್ದಳು. ಅಲ್ಲಿ ಸಿಕ್ಕ ನೆಂಟರಿಷ್ಟರ ಜೊತೆ ಒಂದಿಲ್ಲೊಂದು ಸಂದರ್ಭದಲ್ಲಿ ಫೋಟೋ ತೆಗೆದುಕೊಂಡು ಬಂದಿದ್ದಳು. ಊರಿಂದ ಬಂದ ತಕ್ಷಣವೇ ಅಲ್ಲಿ ತೆಗೆದ ಫೋಟೋಗಳನ್ನು ಹಾಕತೊಡಗಿದಳು. ಊಟ ತಿಂಡಿಯಿಂದ ಹಿಡಿದು ಎಲ್ಲವನ್ನು ಕಣ್ಣಿಗೆ ಕುಕ್ಕುವಂತೆ ಪ್ರದರ್ಶಿಸತೊಡಗಿದಳು.  ನೋಡಿಕೊಂಡವರಲ್ಲ ಹೊಟ್ಟೆ ಉರಿದುಕೊಂಡರು. 

ಆದರೆ ನಿಜಕ್ಕೂ ಹಾಗಾಗಿತ್ತೇ? ಬೆಂಗಳೂರಿನಿಂದ ನೇರ ಅತ್ತೆ ಮನೆಗೆ ತೆರಳಿದ ಸುಜಾತ ಅಲ್ಲಿ ಅತ್ತೆಯೊಂದಿಗೆ ಸಣ್ಣ ಮನಸ್ತಾಪ ಮಾಡಿಕೊಂಡು ತಾಯಿ ಮನೆಗೆ ತೆರಳಿದಳು. ಅಲ್ಲಿ ಸುಮ್ಮನೆ ಕೂರಲಾಗದೇ ಕೊಂಕೆತ್ತುಕೊಂಡಿದ್ದುಕೊಂಡೇ ದಿನ ಕಳೆದಿದ್ದಳು. ಮಧ್ಯೆ, ನೆಂಟರಿಷ್ಟರ ಮನೆಗೂ ಒಂದು ಸುತ್ತು ಹೋಗಿ ಬಂದಿದ್ದಳು. ಎಲ್ಲೆಡೆ ಆಪ್ತರೊಂದಿಗೆ ಸುಂದರ ಕ್ಷಣಗಳನ್ನು ಅನುಭವಿಸುವುದರ ಬದಲಾಗಿ, ಫೋಟೋ ತೆಗೆಯುವುದರಲ್ಲೇ ಬ್ಯುಸಿಯಾಗಿದ್ದಳು. ನಿಜ ಹೇಳಬೇಕೆಂದರೆ, ನಗುಮೊಗ ಕೇವಲ ಫೋಟೋದಲ್ಲಷ್ಟೇ ದಾಖಲಾಗಿತ್ತು. ಕೊನೆಯಲ್ಲಿ ಅಂತೂ ವಾಪಾಸು ಬಂದೆ ಎನ್ನುತ್ತ ಬೆಂಗಳೂರಿಗೆ ಬಂದಿಳಿದಿದ್ದಳು. ಆದರೆ, ಫೇಸ್‌ಬುಕ್‌ನಲ್ಲಿ ಇದೆಲ್ಲ ಎಲ್ಲಿ ಕಾಣಬೇಕು. ಫೇಸ್‌ಬುಕ್‌ನಲ್ಲಿ ರೀಲ್ ಬದುಕು ಕಾಣಸಿಗುತ್ತದೆಯೇ ಹೊರತು ರಿಯಲ್ ಬದುಕು ಎಂದಿಗೂ ಕಾಣುವುದಿಲ್ಲ.

ಯುರೋಪ್ ಟ್ರಿಪ್ ಮತ್ತು ಫೋಟೋಗಳು

ಸದಾ ಬಿಸಿನೆಸ್ ಟ್ರಿಪ್ಪಿನಲ್ಲಿ ಬ್ಯುಸಿ ಇರುವ ಪತಿಯನ್ನು ಹೊಂದಿರುವ ಸರಸೂ, ವರುಷಕ್ಕೊಮ್ಮೆ ಆತನೊಂದಿಗೆ ತೆರಳುತ್ತಾಳೆ. ಅದೆಂಥದೋ ಕಾನ್ಫರೆನ್ಸ್. ಅದು ಅವಳಿಗೆ ಅರ್ಥವಾಗದ ವಿಷಯ. ಅರ್ಥವಾಗುವ ವಿಷಯವೆಂದರೆ ಟ್ರಿಪ್, ಹೊಟೆಲ್ ಮತ್ತು ಫೋಟೋಗಳು. ಅಲ್ಲಿ ಕಂಡ ಕಂಡದ್ದನ್ನೆಲ್ಲ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕುತ್ತಿರುತ್ತಾಳೆ. ಆ ಫೋಟೋಗಳನ್ನು ನೋಡಿದ ಅವಳ ಸ್ನೇಹಿತೆಯರು ಅವಳ ಅದೃಷ್ಟವನ್ನು ಕೊಂಡಾಡುತ್ತಿದ್ದರು. ನಿಜ ಹೇಳಬೇಕೆಂದರೆ, ಇತರರಂತೆ ಅವಳದ್ದು ಸಾಮಾನ್ಯ ಬದುಕು. ಆದರೆ, ಅದನ್ನು ಬಿಂಬಿಸುವ ಪರಿ ಬೇರೆಯದಾಗಿತ್ತು. ಇದರಿಂದ ನೋಡಿದವರೆಲ್ಲ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದರು. 

ಟ್ರೆಂಡಿಂಗ್ ಡೆಲ್ಗೋನ ಕಾಫೀ ಮತ್ತು ಕ್ಯಾಪ್ಷನ್

ಇನ್ನು ಡೆಲ್ಗೊನ ಕಾಫೀ ಬಗ್ಗೆ ಹೇಳಲೇಬೇಕು. ಕಾಫೀಯನ್ನು ಎಂದೂ ಹೀರದ ಆರಾಧನಾ, ಡೆಲ್ಗೊನ ಕಾಫೀ ಮಾಡಿದ್ದಳು. ಅದೆಲ್ಲೋ ಟ್ರೆಂಡಿಂಗ್ ಆಗಿದೆಯಂತೆ. ಹಾಗಿದ್ದಾಗ ಮನೆಯಲ್ಲಿ ಟ್ರೈ ಮಾಡದಿದ್ದರೆ ಆದೀತೆ! ತಾನೇನೂ ಕಡಿಮೆಯಿಲ್ಲ ಎಂಬಂತೆ  ಡೆಲ್ಗೊನಾ ತಯಾರು ಮಾಡೇಬಿಟ್ಟಳು. ಆದರೆ, ಅವಳಿಗೆ ಆ ಕಾಫೀ ಕುಡಿಯುವ ಅಭ್ಯಾಸವೇ ಇಲ್ಲ. ಹಾಗೆಂದು “ಒಲ್ಲದ ಕಾಫೀ” ಎಂದು ಫೋಟೋ ಹಾಕಲಾದೀತೇ! “ಮ್ಯಾಡ್ ಫಾರ್ ಡೆಲ್ಗೋನ ಕಾಫೀ”, “ ಬ್ರೈಟ್ ಡೇ ವಿತ್ ಡೆಲ್ಗೋನ” ಎಂದೆಲ್ಲ ಕ್ಯಾಪ್ಷನ್ ಬರದದ್ದೇ ಬರದದ್ದು. ಕೊನೆಗೆ ಡೆಲ್ಗೊನ ಕಾಫೀ ಕುಡಿಯುವ ಕೆಲಸ ಅವಳ ಪತಿರಾಯರಿಗೆ ನೀಡಿದಳು. ಅತ್ತ ಬಿಳಿ ಹಾಲೂ ಅಲ್ಲದ, ಇತ್ತ ಕಾಫೀಯೂ ಅಲ್ಲದ, ವಿಚಿತ್ರ ಪೇಯವನ್ನು ಸವಿದು ಗೊಂದಲಕ್ಕೀಡಾಗುವ ಪರಿಸ್ಥಿತಿ ಅವಳ ಪತಿರಾಯರದ್ದು. ಹೋಗಲಿ ಬಿಡಿ. ಆದರೆ, ಜಗತ್ತಿಗೆ ಕಂಡದ್ದು ಮ್ಯಾಡ್ ಫಾರ್ ಡೆಲ್ಗೋನ ಮಾತ್ರ.

ಒಲ್ಲದ ಕಾಫೀಗೆ ಸಿಕ್ಕಿದ್ದು ಬರೋಬ್ಬರಿ ಐನೂರು ಲೈಕ್ಸ್.  ಕಾಫೀ ಮಾಡಿದ್ದಕ್ಕೂ ಸಾರ್ಥಕವಾಗಿಯಿತು ಎಂದು ಆರಾಧನಾ ಮತ್ತೆ ವೈರಲ್ ತಿಂಡಿಗಳನ್ನು ಹುಡುಕತೊಡಗಿದಳು.

ಸಾಲು ಸಾಲು ಸುಳ್ಳುಗಳು

ಒಂದೊಂದು ಫೋಟೋ ಹಿಂದೆಯೂ ಇರುವ ಸುಳ್ಳುಗಳನ್ನು ತಿಳಿಯುವುದು ಕಷ್ಟಸಾಧ್ಯ. ಫೋಟೋದಲ್ಲಿ ನಿಜವಾದ ನಗುವೇ ಇರುತ್ತದೆ ಎಂದು ಹೇಳಲಾಗುವುದಿಲ್ಲ. ನಗು ಕೇವಲ ಕ್ಷಣಿಕದ್ದಾಗಿರಬಹುದು. ಕಣ್ಣಿನ ಕೆಳಗಿನ ಕಪ್ಪು ವರ್ತುಲಗಳು ಮೇಕಪ್ ಸಹಾಯದಿಂದ ತಿಳಿಯಾಗಿರಬಹುದು. ಮೊಗದಲ್ಲಿನ ಸಣ್ಣ ಸಣ್ಣ ಸುಕ್ಕುಗಳೆಲ್ಲ ಫೋಟೋ ಎಡಿಟರ್ ಮಾಯ ಮಾಡಿರಬಹುದು. ಬಿಳಿ ಬಣ್ಣದ ಕೂದಲುಗಳು ಕಪ್ಪು ಬಣ್ಣದಲ್ಲಿ ಒಪ್ಪಓರಣವಾಗಿರಬಹುದು. ಬಳುಕುವ ಸೊಂಟದ ಹಿಂದೆ ಕ್ಯಾಮರ ಕೈಚಳಕ ಕೆಲಸ ಮಾಡಿರಬಹುದು. 

ಯುರೋಪ್ ಟ್ರಿಪ್  ಫೋಟೋಗಳು ಮಾತ್ರ ಅಂದವೆಂದುಕೊಳ್ಳಬೇಡಿ. ನಮ್ಮೂರಿಗೆ ತೆರಳುವ ಕವಲು ದಾರಿಗಳೂ ಅಷ್ಟೇ ಸುಂದರವಾಗಿರುತ್ತದೆ. ಅದನ್ನು ಕ್ಲಿಕ್ಕಿಸಿ ಸುಂದರ ಹೆಸರು ನೀಡುವ ಅವಶ್ಯಕತೆ ಇರುತ್ತದೆ ಅಷ್ಟೇ…ಡೆಲ್ಗೊನ ಕಾಫೀ ಟ್ರೆಂಡಿಂಗ್ ಆಗಿರಬಹುದು. ಆದರೆ, ನಮ್ಗಳ ಮನಸು ಇಡ್ಲಿ-ಸಾಂಬಾರನ್ನೇ ಇಷ್ಟಪಡುವುದು. ಬಿಸಿ ಬಿಸಿ ಮಸಾಲಾ ದೋಸೆ ಸಿಕ್ಕರೆಂತೂ, ಅದು ಖಾಲಿಯಾದ ಮೇಲೆ ಮನಸು ತೃಪ್ತಿಗೊಳ್ಳುವುದು.

ಸೋಷಿಯಲ್ ಮಿಡಿಯಾ ಎಂದರೆ ಸುಳ್ಳಿನ ಕಂತೆ. ಶೇಕಡ 99ರಷ್ಟುಸಾಮಾನ್ಯ ಬದುಕನ್ನು ಮರೆಮಾಚಲಾಗುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಹೇಳದೇ ಇರುವಂಥಹ ಹಾಗೂ ಹೇಳಲೇಬಾರದಂಥಹ ಕಥೆಗಳು ಪ್ರತಿಯೊಬ್ಬರ ಬದುಕಲ್ಲೂ ಇರುತ್ತದೆ. ಕೇವಲ 1ರಷ್ಟು ಬಣ್ಣದ ಬದುಕನ್ನು ಮಾತ್ರ ಹೆಕ್ಕಿ ಜಗತ್ತಿಗೆ ತೋರಿಸಲಾಗುತ್ತದೆ. ಆದರೆ, ಅಲ್ಲಿ ಕಾಣುವ ಬಣ್ಣದ ಬದುಕಿನೊಂದಿಗೆ ಹೋಲಿಕೆ ಮಾಡಿ, ಅದನ್ನು ನಕಲು ಮಾಡಲಾಗದೇ ಬೇಸರಿಸಿಕೊಳ್ಳುವುದಕ್ಕಿಂತ, ನಮ್ಮ ಸಾಮಾನ್ಯ ಬದುಕೇ ಅದೆಷ್ಟೋ ಸುಂದರ. ಆ ಸೌಂದರ್ಯವನ್ನು ಸವಿಯಲು ನಾವು ಮನಸು ಮಾಡಬೇಕಷ್ಟೇ.

 

ಚೈತ್ರ ಎಲ್ ಹೆಗಡೆ

Read Previous

ಪ್ರತಿಭಾನ್ವಿತರಿಗೆ ಕೈತುಂಬ ಆದಾಯ ತಂದುಕೊಡುವ ಜಾಲತಾಣಗಳು

Read Next

ಮಿನುಗು ತಾರೆ – Minugu Taare

Most Popular