ವಿಶ್ವ ಸುಂದರಿಯ ಸ್ಪರ್ಧೆಗಳು ಇನ್ನು ಮುಕ್ತ ಮುಕ್ತ…

    ಕ್ರಿಕೆಟಿನ ಅಬ್ಬರದ ನಡುವೆ ಕಳೆದ ಶನಿವಾರ ರಾತ್ರಿ ಭುವನ ಸುಂದರಿ ಸೌಂದರ್ಯ ಸ್ಪರ್ಧೆ ಸದ್ದಿಲ್ಲದೇ ನಡೆದು ಹೋಯಿತು. ಈ ಬಾರಿಯ ಸೌಂದರ್ಯ ಸ್ಪರ್ಧೆಯ ಕಿರೀಟ ಹೊತ್ತ ಚೆಲುವೆಯರಿಗಿಂತ ಸಾಂಪ್ರದಾಯಿಕ ನಿಯಮಗಳನ್ನು ಗಾಳಿಗೆ ತೂರಿ ಬಂದ ಬೆಡಗಿಯರ ವಿಶ್ವಾಸವೇ ಹೆಚ್ಚು ಸುದ್ದಿ ಮಾಡಿತು.

ಈ ಬಾರಿ ಕೇವಲ ಬಳುಕುವ ಬಳ್ಳಿಯಂತಿರುವ ಬೆಡಗಿಯರು ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಿರಲಿಲ್ಲ. ಸ್ಪರ್ಧೆಯಲ್ಲಿ ತಾಯಂದಿರಿದ್ದರು, ಪ್ಲಸ್ ಸೈಜ್ ಅಂದರೆ ಕೊಂಚ ದಪ್ಪವೇ ಎನ್ನಿಸಿಕೊಳ್ಳುವಂಥಹ ಮೈ ಮಾಟ ಹೊಂದಿರುವ ಅಭ್ಯರ್ಥಿಯಿದ್ದಳು. ಮತ್ತೆ ಟ್ರಾನ್ಸಜೆಂಡರ್ ಸ್ಪರ್ಧಾಳುಗಳು ಕೂಡ ತಾವೇನು ಕಡಿಮೆ ಇಲ್ಲ ಎನ್ನುವಂತೆ ಇತರ ಬೆಡಗಿಯರ ನಡುವೆ ಮಿಂಚಿ ಹೋದರು. 

ನಿರ್ದಯಿ ನಿಯಮಾವಳಿಗಳು: 

ಇದೆಲ್ಲ ಸುದ್ದಿ ಮಾಡಲು ಕಾರಣ ಸೌಂದರ್ಯ ಸ್ಪರ್ಧೆಯ ಕಠಿಣ ನಿಯಮಾವಳಿಗಳು. ಹೌದು. ಕಳೆದ ಒಂದು ವರ್ಷದ ಹಿಂದಷ್ಟೇ ಈ ಸ್ಪರ್ಧೆಯಲ್ಲಿ ಭಾಗವಹಿಸಬೇಕೆಂದರೆ ಕೇವಲ ಬಟ್ಟಲ ಕಣ್ಗಳು, ತಿದ್ದಿಟ್ಟ ಮೂಗು, ವೈಯ್ಯಾರದ ಮೈಮಾಟವೊಂದೇ ಇದ್ದರೆ ಸಾಲದಾಗಿತ್ತು. ಅವರು ವಿಧಿಸುವ ಎಲ್ಲ ಷರತ್ತುಗಳನ್ನು ಸ್ಪರ್ಧಾಳುಗಳು ತಲೆಬಾಗಿ ಪಾಲಿಸಲೇಬೇಕಾಗಿತ್ತು. ಆದರೆ ಅವರ ಷರತ್ತುಗಳಿಂದಾಗಿ ಅದೆಷ್ಟೋ ಹೆಣ್ಣು ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸುವ ಚಾಕಚಕ್ಯತೆ ಇದ್ದರೂ ಕೂಡ ಸ್ಪರ್ಧೆಯಿಂದ ಹಿಂದುಳಿಯಬೇಕಾಗುತ್ತಿತ್ತು.  

ವಯಸ್ಸು ಹದಿನೆಂಟಾಗಿರಬೇಕು ಆದರೆ, ಇಪ್ಪತ್ತೆಂಟು ದಾಟಿರಬಾರದು: 

ಈ ಸೌಂದರ್ಯ ಸ್ಪರ್ಧೆಯೆಂದರೆ ತಮಾಷೆಯಲ್ಲ. ಈಗತಾನೇ ಹದಿನೆಂಟು ದಾಟಿರುವ ಹುಡುಗಿಯರಾಗಿರಬೇಕು. ದೇಹವನ್ನು ದಂಡಿಸಿ, ಬಳುಕುವ ಬಳ್ಳಿಯ ಹಾಗಿರಬೇಕು. ಪಾಯಿಂಟೆಡ್ ಹೀಲ್ಸ್ ಧರಿಸಿ ನಡೆಯುವುದನ್ನು ಕಲಿತಿರಬೇಕು. ಅರಳು ಹುರಿದ ಹಾಗೇ ಮಾತನಾಡುವವರಾಗಿರಬೇಕು. ಕುಳಿತುಕೊಳ್ಳುವ ಭಂಗಿ, ನಗುವ ರೀತಿ, ಮಾತನಾಡುವ ವಿಷಯ ಸೇರಿದಂತೆ ಎಲ್ಲದರ ಕುರಿತು ಕಠಿಣ ತರಬೇತಿ ಪಡೆದಿರಬೇಕು. ಹಾಗೆಂದು ಕೊನೆಯ ಸ್ಪರ್ಧೆ ನಡೆಯುವ ವೇಳೆಗೆ ವಯಸ್ಸು 28 ವರ್ಷ ತುಂಬಿದ್ದರೆ, ಆ ಸ್ಪರ್ಧಾಳು ಸ್ಪರ್ಧೆಯಲ್ಲಿ ಭಾಗವಹಿಸುವಂತಿರಲಿಲ್ಲ. ಇನ್ನು ಕಾಲೇಜು ಮೆಟ್ಟಿಲನ್ನು ಹತ್ತದೇ ಹೋದರೂ ತೊಂದರೆ ಇಲ್ಲ ಎನ್ನುವ ಈ ಸ್ಪರ್ಧೆಯ ಆಯೋಜಕರು, 28 ವರ್ಷ ದಾಟಿದರೆ ಮಾತ್ರ ಸ್ಪರ್ಧೆಗೆ ಅರ್ಹತೆಯೇ ಇಲ್ಲ ಎನ್ನುತ್ತಿದ್ದರು. 

ಮದುವೆಯಾಗಕೂಡದು, ಮಕ್ಕಳಂತೂ ಆಗಿರಲೇಬಾರದು: 

ಮದುವೆ ಎಂಬುದು ಹೆಣ್ಣು ಮತ್ತು ಗಂಡಿಗೆ ಸಮಾಜ ನೀಡಿದ ಕೊಡುಗೆ. ಹಾಗೇ ತಾಯ್ತನ ಎಂಬುದು ಪ್ರಕೃತಿ ನೀಡಿದ ವರ. ಆದರೆ ಇದನ್ನೆಲ್ಲ ಬದಿಗಿರಿಸಿ ಹೆಣ್ಣು ಮಕ್ಕಳು ಸ್ಪರ್ಧೆಗೆ ಹೋಗಬೇಕಿತ್ತು.  ಹಾಗೊಮ್ಮೆ ಮದುವೆಯಾದರೆ ಮುಡಿಗೇರಿದ ಕಿರೀಟವನ್ನು ತೆರಿದಿಟ್ಟೇ ಮುಂದಿನ ಹೆಜ್ಜೆ ಇಡಬೇಕಿತ್ತು. 

ಭುವನ ಸುಂದರಿ ಸ್ಪರ್ಧೆ 1926ರಲ್ಲಿ ಆರಂಭವಾದರೂ, ಎರಡು ವಿಶ್ವ ಯುದ್ಧಗಳ ಪರಿಣಾಮವಾಗಿ 25 ವರ್ಷಗಳ ಕಾಲ ನಿಂತು ಹೋಗಿತ್ತು. ಆದರೆ ಮತ್ತೆ ಅಮೇರಿಕದಲ್ಲಿ 1952ರಿಂದ ಆರಂಭಿಸಲಾಯಿತು.  ಈ ಸ್ಪರ್ಧೆಯಲ್ಲಿ ಫಿನ್ ಲ್ಯಾಂಡಿನ ಸ್ಪರ್ಧಿ ಆರ್ಮಿ ಕುಸೇಲಾ ಕಿರೀಟವನ್ನು ಮುಡಿಗೇರಿಸಿಕೊಂಡರು. ಆದರೆ, ವರುಷ ಕಳೆಯುವುದಕ್ಕೂ ಮುನ್ನವೇ ಆರ್ಮಿ ಮದುವೆಯಾದರು. ಇದು ಆಯೋಜಕರ ಕೆಂಗಣ್ಣಿಗೆ ಗುರಿಯಾಗಿತ್ತು. ಇದರಿಂದ ಅಧಿಕೃತವಾಗಿ ಅಲ್ಲದೇ ಹೋದರೂ ಅನಧಿಕೃತವಾಗಿ ಆರ್ಮಿ ತಮ್ಮ ಸ್ಥಾನ ಕಳೆದುಕೊಂಡರು ಎನ್ನಲಾಗುತ್ತದೆ.  

ಎಲ್ ಜಿಬಿಟಿ ಸಮುದಾಯಕ್ಕೆ ಅವಕಾಶವೇ ಇರಲಿಲ್ಲ: 

ಎಲ್ ಜಿಬಿಟಿ ಸಮುದಾಯಕ್ಕೂ ಕೂಡ ಸ್ಪರ್ಧೆಯಲ್ಲಿ ಅವಕಾಶ ನೀಡಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿಬಂದಿತ್ತು. ಆದರೆ, ಬೇಡಿಕೆಗೆ ಹಸಿರು ನಿಶಾನೆ ಸಿಕ್ಕಿರಲಿಲ್ಲ.  ಹಸಿರು ನಿಶಾನೆ ಸಿಕ್ಕಿದ ಮೇಲೂ ಉತ್ತಮ ಪ್ರತಿಕ್ರಿಯೆಯೇನೂ ಸಿಕ್ಕಿರಲಿಲ್ಲ.

ಅಲಿಖಿತ ನಿಯಮಗಳು: 

ಇಷ್ಟೆಲ್ಲ ಲಿಖಿತ ನಿಯಮಗಳ ನಡುವೆ ಅಲಿಖಿತ ನಿಯಮಗಳು ಕೂಡ ಸ್ಪರ್ಧಿಗಳನ್ನು ಹೈರಾಣಾಗಿಸಿತ್ತು. ಹುಡುಗಿಯರು ಕನಿಷ್ಠ ಐದು ಅಡಿ ಏಳು ಇಂಚಿಗಿಂತ ಎತ್ತರ ಹೊಂದಿರಲೇಬೇಕಾಗಿತ್ತು. ಅವರ ಸೊಂಟದ ಸುತ್ತಳತೆಯಿಂದ ಹಿಡಿದು ತಲೆಯಿಂದ ಕಾಲಿನವರೆಗೂ ಒಂದು ಗ್ರಾಂ ತೂಕ ಕೂಡ ಹೆಚ್ಚಾಗದಂತೆ ನೋಡಿಕೊಳ್ಳಬೇಕಿತ್ತು. ಸ್ವಿಮ್ ಸೂಟ್ ಧರಿಸಲು ಯೋಗ್ಯವಾಗಿರುವಂಥಹ ದೇಹ ಹೊಂದಿರಬೇಕಿತ್ತು. ಆಯಾ ದೇಶದ ಸಾಂಪ್ರದಾಯಿಕ ಉಡುಗೆ, ಗೌನ್ ಸೇರಿದಂತೆ ಸ್ವಿಮ್ ಸೂಟ್ ಧರಿಸಲೇಬೇಕಿತ್ತು. ಹೀಗೆ ಸೌಂದರ್ಯ ಸ್ಪರ್ಧೆಗೆ ಭಾಗವಹಿಸಲು ಆಯೋಜಕರ ಮೂಗಿನ ನೇರಕ್ಕೆ ಇದ್ದ ಸಿದ್ಧ ಸೂತ್ರಗಳಿಗೆ ಅಭ್ಯರ್ಥಿಗಳು ತಲೆ ಬಾಗಲೇಬೇಕಿತ್ತು. 

ಕೊನೆಗೂ ಬೀಸಿದ ಬದಲಾವಣೆಯ ಗಾಳಿ: 

ಆಯೋಜಕರ ವಿರುದ್ಧ ಅದೆಷ್ಟೋ ಸಂಸ್ಥೆಗಳು ಹಾಗೂ ಹೆಣ್ಣು ಮಕ್ಕಳು ತಿರುಗಿ ಬಿದ್ದಿದ್ದರು. ಅವರ ಮಾನದಂಡಗಳನ್ನು ಕಟುವಾಗಿ ಟೀಕಿಸಿದ್ದರು. ಕೇವಲ ಹೆಣ್ಣು ಮಕ್ಕಳನ್ನು ಬೊಂಬೆಯಂತೆ ತಮ್ಮ ಪ್ರಚಾರಕ್ಕೆ ಉಪಯೋಗಿಸಿಕೊಂಡು, ಕೆಲಸ ಸಾಧಿಸಿಕೊಳ್ಳುವ ಆಯೋಜಕರ ವಿರುದ್ಧ ಪ್ರತಿಭಟನೆ ಮಾಡಿದವರು ಇದ್ದರು. ಆದರೆ ಇದ್ಯಾವುದಕ್ಕೂ ಆಯೋಜಕರು ತಲೆ ಕೆಡಿಸಿಕೊಂಡಿರಲಿಲ್ಲ.  

ಇದೀಗ ವಿಶಾಲವಾದ ಮಾರುಕಟ್ಟೆ ಆಯೋಜಕರ ಕಣ್ಣು ತೆರೆಸಿದೆ. ತಮ್ಮ ಮಾನದಂಡಗಳನ್ನು ಬದಲಾಯಿಸಿದರೆ ಹೊಸ ಅವಕಾಶಗಳನ್ನು ಬಾಚಿಕೊಳ್ಳಬಹುದು ಎಂಬ ಸತ್ಯ ಅರ್ಥವಾಗಿದೆ. ಅಷ್ಟೇ ಅಲ್ಲದೇ ಹಿಂದಿನ ಸಿದ್ಧಾಂತಗಳನ್ನೇ ನಂಬಿಕೊಂಡಿದ್ದರೆ, ಮುಂದೊಂದು ದಿನ ಕೆಲ ಅವಕಾಶಗಳ ಬಾಗಿಲುಗಳು ಮುಚ್ಚಿಕೊಳ್ಳಲಿದೆ ಎಂಬುದು ಅರಿವಾಗಿದೆ. ಹೀಗಾಗಿ ಆಯೋಜಕರು ಮಾನದಂಡಗಳನ್ನು ಬದಲಾಯಿಸಿ ಹೊಸ ಹೆಜ್ಜೆ ಇರಿಸಿದ್ದಾರೆ. 

ತಾಯಂದಿರಿಗೆ ಸ್ಪರ್ಧೆಗಳಲ್ಲಿ ಅವಕಾಶ ನೀಡಲಾಗುತ್ತಿದೆ. ಮದುವೆಯಾದವರಿಗೂ ಯಾವುದೇ ನಿರ್ಬಂಧ ಹೇರಲಾಗುತ್ತಿಲ್ಲ. ಎಲ್ ಜಿ ಬಿ ಟಿ ಸಮುದಾಯದವರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಹದಿನೆಂಟು ತುಂಬಿದ ಯಾವುದೇ ಹೆಣ್ಣು ಮಕ್ಕಳು ಕೂಡ ಸೌಂದರ್ಯ ಸ್ಪರ್ಧೆಗಿಳಿಯಲು ಸಮ್ಮತಿಸಲಾಗಿದೆ. 

ಇನ್ನು ಅಂದ ಚಂದದ ಗೊಂಬೆಯಂತಿರುವವರನ್ನು ಮಾತ್ರ ಆಯ್ಕೆ ಮಾಡುವುದನ್ನು ಕೈ ಬಿಡಲಾಗಿದೆ. ದಪ್ಪಗಿದ್ದರೂ ತೊಂದರೆ ಇಲ್ಲ. ಎತ್ತರವಿಲ್ಲದೇ ಹೋದರೂ ಅಡ್ಡಿ ಇಲ್ಲ. ಆತ್ಮದ ಸೌಂದರ್ಯ ಹೊಂದಿರುವ ಮತ್ತು ಆತ್ಮ ವಿಶ್ವಾಸ ಹೊಂದಿರುವ ಯಾವುದೇ ಹೆಣ್ಣು ಮಗಳಾದರೂ ಸರಿ, ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದು ಕೊನೆಗೂ ಮುಕ್ತ ಅವಕಾಶ ಕಲ್ಪಿಸಲಾಗಿದೆ. 

ಭುವನ ಸುಂದರಿ ಸ್ಪರ್ಧೆಯಲ್ಲಿ ಹೊಸ ಮಜಲು: 

ವೈವಿಧ್ಯತೆಯಿಂದ ಕೂಡದ ಈ ಬಾರಿಯ ಭುವನ ಸುಂದರಿ ಸ್ಪರ್ಧೆ ಎಲ್ಲರಿಗೂ ಖುಷಿ ಕೊಟ್ಟಿದ್ದಂತೂ ಸುಳ್ಳಲ್ಲ. ಗ್ವಾಟೆಮಾಲ ದೇಶದ ಎರಡು ಮಕ್ಕಳ ತಾಯಿ ಮಿಷೆಲ್ ಈ ಬಾರಿಯ ಭುವನ ಸುಂದರಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಇದರೊಂದಿಗೆ ಕೊಲಂಬಿಯಾದ ಸುಂದರಿ ಕ್ಯಾಮಿಲ್ಲಾ ವಿವಾಹಿತರಾಗಿದ್ದರು. ನೆದರ್ಲ್ಯಾಂಡ್ಸಿನ ಸುಂದರಿ ರಿಕ್ಕಿ ಟಾಪ್ ಟೆನ್ ಪಟ್ಟಿಯಲ್ಲಿ ಸ್ಥಾನ ಗಳಿಸಿದ ಮೊದಲ ತೃತೀಯ ಲಿಂಗಿ ಎನಿಸಿಕೊಂಡರು. ಪೊರ್ಚುಗಲ್ಲಿನಿಂದ ಕೂಡ ಮೊದಲ ಬಾರಿಗೆ ತೃತೀಯ ಲಿಂಗಿಯಾದ ಮರೀನಾಳನ್ನು ಸ್ಪರ್ಧೆಗೆ ಆಯ್ಕೆ ಮಾಡಲಾಗಿತ್ತು. ಇದೆಲ್ಲದರೊಂದಿಗೆ ಬಲು ವಿಶೇಷ ಎನಿಸಿಕೊಂಡಿದ್ದು ನೇಪಾಳದ ಸುಂದರಿ ಜೇನ್ ದೀಪಿಕಾ ಗ್ಯಾರೆಟ್ ಪ್ಲಸ್ ಸೈಜ್ ಹೊತ್ತು ರಾಂಪ್ ವಾಕ್ ಮಾಡಿದರು. ಎಲ್ಲ ಬೆಡಗಿಯರಿಗಿಂದ ತುಸು ಹೆಚ್ಚೇ ತೂಕ ಹೊಂದಿದ್ದ ದೀಪಿಕಾ, ಬಳಕುವ ಬಳ್ಳಿಯರ ನಡುವೆ ತಾವೇನೂ ಕಡಿಮೆ ಇಲ್ಲ ಎಂಬುವಂತೆ ಅಂತಿಮ ಹಂತದ 20 ಸುಂದರಿಯರಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು. ಮತ್ತು ಭುವನ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಿದ ಮೊದಲ ಪ್ಲಸ್ ಸೈಜ್ ಸುಂದರಿ ಎಂಬ ಹೆಗ್ಗೆಳಿಕೆಗೂ ಪಾತ್ರರಾದರು. ಅವರ ಆತ್ಮವಿಶ್ವಾಸದ ಹೆಜ್ಜೆಗೆ ಹೊಗಳಿಕೆಯ ಮಹಾಪೂರವೇ ಹರಿದು ಬಂತು.     

ಕೊನೆಯ ಸಾಲು: ಸಂಪ್ರದಾಯಿಕ ಕಟ್ಟಳೆಗಳನ್ನು ಸರಿಸಿ ಮುಕ್ತ ಅವಕಾಶ ಕಲ್ಪಿಸಿದಾಗಲೇ ಇಂಥಹ ಸ್ಪರ್ಧೆಗಳಿಗೆ ನಿಜವಾದ ಅರ್ಥ ಸಿಗುವುದರಲ್ಲಿ ಸಂಶಯವಿಲ್ಲ.  

 

ಚೈತ್ರ ಎಲ್ ಹೆಗಡೆ

Read Previous

ಡೀಪ್‌ಫೇಕ್ ತಂತ್ರಜ್ಞಾನ – ಏನಿದರ ಮರ್ಮ?

Read Next

ಫ್ರಿಲಾನ್ಸಿಂಗ್‌ನಲ್ಲಿ ಯಶಸ್ವಿಯಾಗಲು 9 ಸೂತ್ರಗಳು

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Most Popular