ಫ್ರಿಲಾನ್ಸಿಂಗ್‌ನಲ್ಲಿ ಯಶಸ್ವಿಯಾಗಲು 9 ಸೂತ್ರಗಳು

ಫ್ರೀಲಾನ್ಸಿಂಗ್ ಎಂಬುದು ಸಮುದ್ರವಿದ್ದಂತೆ. ಅದರ ಆಳ ಅಗಲಗಳನ್ನು ಲೆಕ್ಕಹಾಕುವುದು ಅಷ್ಟು ಸುಲಭವಲ್ಲ. ಈಜುತ್ತ ಮುಂದೆ ತೆರಳಿದಂತೆ ಪ್ರತಿ ಬಾರಿಯೂ ಹೊಸ ಅಲೆ ಸಿಗುತ್ತದೆ. ಪ್ರತಿ ಬಾರಿ ಮುನ್ನುಗ್ಗಿದಾಗಲೂ ಹೊಸ ದಾರಿ ಎದುರಾಗುತ್ತದೆ. ಆ ದಾರಿಯಲ್ಲಿ ಕಲಿಯುತ್ತ, ತಿಳಿಯುತ್ತ ಸಾಗುತ್ತಿದ್ದರೆ ಮಾತ್ರ ಯಶಸ್ಸಿ ಎದುರಾಗುತ್ತದೆ. 

ಪ್ರತಿಯೊಂದು ಕ್ಷೇತ್ರದಲ್ಲೂ ಕಾಲಿಟ್ಟಾಗ ಅಭಿವೃದ್ಧಿ ಹೊಂದುವುದು ಅಷ್ಟು ಸುಲಭವಲ್ಲ. ಫ್ರೀಲಾನ್ಸಿಂಗ್ ಕೂಡ ಹೊರತಾಗಿಲ್ಲ. ಯಶಸ್ಸಿನ ಮೆಟ್ಟಿಲು ಏರಬೇಕೆಂದರೆ ಮೊದಲು ಕಷ್ಟಗಳ ಅಡಿಪಾಯ ಹಾಕಿಕೊಳ್ಳಬೇಕು. ಹಾಗೆಂದರೆ ಅಷ್ಟೊಂದು ಕಷ್ಟವೇ ಎನ್ನಬೇಡಿ. ಸ್ವ ಉದ್ಯೋಗ ಒಮ್ಮೆ ನಮ್ಮ ಕೈ ಹಿಡಿದರೆ, ಮುಂದಿನ ದಿನಗಳು ಸುಗಮವಾಗಲಿದೆ ಎಂದೇ ಅರ್ಥ. ನಮ್ಮ ದಾರಿ ಸುಗಮವಾಗಬೇಕೆಂದರೆ ಅಡಿಪಾಯವನ್ನು  ಗಟ್ಟಿಯಾಗಿ ಹಾಕಿಕೊಳ್ಳಬೇಕು. 

  1. ಸೂಕ್ತ ಕ್ಷೇತ್ರದ ಆಯ್ಕೆ: ಸೂಕ್ತ ಕ್ಷೇತ್ರ ಆಯ್ದುಕೊಳ್ಳುವುದು ಪ್ರಥಮ ಆಧ್ಯತೆ. ಪ್ರತಿಯೊಂದು ಕ್ಷೇತ್ರದಲ್ಲಿ ಗ್ರಾಹಕರ ಬೇಡಿಕೆಗೆ ತಕ್ಕಂತೆ ಉದ್ಯೋಗಗಳು ಸೃಷ್ಠಿಯಾಗುತ್ತದೆ. ಅಂಥಹ ಕ್ಷೇತ್ರಗಳಲ್ಲಿ ಆರಿಸಿಕೊಂಡಲ್ಲಿ ದಾರಿ ಸುಗಮವಾಗುತ್ತದೆ. ಕಡಿಮೆ ಬೇಡಿಕೆಯುಳ್ಳ ಕ್ಷೇತ್ರವಾದರೆ, ಗ್ರಾಹಕರನ್ನು ಹುಡುಕಿಕೊಂಡು ಹೋಗುವುದೇ ದೊಡ್ಡ ತಲೆನೋವಾಗಿ ಪರಿಣಮಿಸುತ್ತದೆ. ಪ್ರತಿಬಾರಿ ಒಂದು ಪ್ರೊಜೆಕ್ಟ್ ಮುಗಿದಾಗ, ಇನ್ನೊಂದು ಪ್ರೊಜೆಕ್ಟ್ ಗಾಗಿ ಕಾಯುವ ಪರಿಸ್ಥಿತಿ ಬಂದೊದಗುತ್ತದೆ. ಹಾಗಾಗಿ ನಿಮ್ಮ ಕ್ಷೇತ್ರದಲ್ಲಿ ಯಾವ ರೀತಿಯ ಬದಲಾವಣೆಗಳು ಆಗುತ್ತಿವೆ. ಹಾಗೂ ಯಾವ ಕೆಲಸಗಳು ಹೆಚ್ಚುತ್ತಿವೆ ಎಂಬುದನ್ನು ಮಾರುಕಟ್ಟೆಯ ಮೇಲೆ ಕಣ್ಣಿಟ್ಟು ಅಧ್ಯಯನ ಮಾಡುತ್ತಿರಿ. ಮತ್ತು ಅದಕ್ಕೆ ತಕ್ಕಂತೆ ಅಗತ್ಯವಿರುವ ಜಾಣ್ಮೆಯನ್ನು ಕಲಿಯುವುದನ್ನು ಮರೆಯದಿರಿ.   
  2. ಸೋಷಿಯಲ್ ಮೀಡಿಯಾದಲ್ಲಿ ಕಮ್ಯೂನಿಟಿಯಲ್ಲಿ ಪಾಲ್ಗೊಳ್ಳಿ: ಪ್ರಸ್ತುತ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಅನಿವಾರ್ಯವಾಗಿ ಹೋಗಿದೆ. ಬೇಕೋ ಬೇಡವೋ ಪ್ರತಿಯೊಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಸ್ತಿತ್ವವನ್ನು ಸಾಬೀತುಪಡಿಸಿಕೊಳ್ಳಲೇಬೇಕು. ಅಂದರೆ ಯುರೋಪ್ ಟ್ರಿಪ್ಪಿನ ಫೋಟೋ ಹಾಕಿಕೊಳ್ಳಲೇಬೇಕೆಂದಿಲ್ಲ. ಆದರೆ ತಮ್ಮಲ್ಲಿರುವ ಕೌಶಲ್ಯದ ಕುರಿತು ಲಿಂಕ್ ಡಿನ್ ಅಥವಾ ತಮ್ಮದೇ ಆದ ವೆಬ್ ಸೈಟಿನಲ್ಲೋ ತೆರೆದಿಡಲೇಬೇಕು. ಜೊತೆಗೆ ತಮ್ಮದೇ ಕ್ಷೇತ್ರಗಳಲ್ಲಿ ಕೆಲಸ ಮಾಡುವವರ ಗ್ರುಪ್ಪುಗಳು ಫೇಸ್ ಬುಕ್ ಅಂಥಹ ಸೋಷಿಯಲ್ ಮೀಡಿಯಾದಲ್ಲಿ ಕಾಣ ಸಿಗುತ್ತವೆ. ಅವುಗಳಲ್ಲಿ ಸೇರಿಕೊಂಡು ತಮ್ಮ ಬಳಗವನ್ನು ಹೆಚ್ಚಿಸಿಕೊಂಡರೆ, ಫ್ರೀಲಾನ್ಸಿಂಗ್ ಆರಂಭಿಸಲು ಸಹಾಯವಾದೀತು. 
  3. ಫ್ರೀಲಾನ್ಸಿಂಗ್ ಕುರಿತು ಮಾತನಾಡಿ: ಫ್ರೀಲಾನ್ಸಿಂಗ್ ಆರಂಭಿಸುವುದಕ್ಕೂ ಮುನ್ನವೇ ಸ್ನೇಹಿತರ ಬಳಿ, ನೆಂಟರಿಷ್ಟರ ಬಳಿ ಸ್ವ ಉದ್ಯೋಗದ ಕುರಿತು ಮಾತನಾಡಿ. ನಿಮ್ಮ ಕಾರ್ಯವೈಖರಿ ಹೇಗಿರುತ್ತದೆ, ಏನೆಲ್ಲಾ ಸೇವೆಗಳನ್ನು ನೀಡುತ್ತಿದ್ದೀರಿ, ಆ ಸೇವೆಗಳಿಂದ ಗ್ರಾಹಕರಿಗಾಗುವ ಲಾಭಗಳೇನು ಎಂಬುದರ ಕುರಿತು ಫ್ರೀಲಾನ್ಸಿಂಗ್ ಆರಂಭಿಸುವುದಕ್ಕೂ ಮುಂಚಿನಿಂದಲೇ ಮಾತನಾಡಿ. ಫ್ರೀಲಾನ್ಸಿಂಗ್ ಕುರಿತು ಮಾಹಿತಿ ಇರುವವರು, ಅವರವರ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಮತ್ತು ಫ್ರೀಲಾನ್ಸಿಂಗ್ ಕೆಲಸಗಳು ಲಭ್ಯವಿದ್ದರೆ ಅವುಗಳ ಮಾಹಿತಿ ನೀಡುವವರು ಕೂಡ ಸಿಗಬಹುದು.  
  4. ವೃತ್ತಿ ಬಿಡಬೇಡಿ: ಫ್ರೀಲಾನ್ಸಿಂಗ್ ಆರಂಭಿಸುವುದಕ್ಕೂ ಮುನ್ನವೇ ಈಗಾಗಲೇ ಮಾಡುತ್ತಿರುವ ವೃತ್ತಿಯನ್ನು ತಕ್ಷಣವೇ ಬಿಡಬೇಡಿ. ಒಂದೆರೆಡು ಪ್ರೊಜೆಕ್ಟ್ ಗಳು ಕೈಗೆ ಬಂದು, ಬಳಿಕ ಕೆಲಸವನ್ನು ಮಾಡಿ ಮುಗಿಸುವ ವಿಶ್ವಾಸ ಮನದಲ್ಲಿ ಮೂಡಿದ ಬಳಿಕ ವೃತ್ತಿಗೆ ವಿದಾಯ ಹೇಳುವುದು ಒಳಿತು.
  5. ಕನಿಷ್ಠ ಆರು ತಿಂಗಳ ಸಂಬಳ ಕೂಡಿಡಿ: ಉದ್ಯೋಗಕ್ಕೆ ವಿದಾಯ ಹೇಳುವುದಕ್ಕೂ ಮುನ್ನ ಕನಿಷ್ಠ ಆರು ತಿಂಗಳಿಂದ ಹಿಡಿದು ಗರಿಷ್ಠ ಒಂದು ವರ್ಷಕ್ಕಾಗುವಷ್ಟು ಹಣವನ್ನು ಕೂಡಿಡಿ. ಮಾರುಕಟ್ಟೆಯಲ್ಲಿ ಕೆಲಸ ಸಿಗುವುದು ಎಷ್ಟು ಸುಲಭವೋ, ಕೆಲಸ ಕಳೆದುಕೊಳ್ಳುವುದು ಅಷ್ಟೇ ಸುಲಭ. ಅದರಲ್ಲೂ ಫ್ರೀಲಾನ್ಸಿಂಗ್ ಮಾಡುವವರಿಗೆ ಇದೊಂದು ದೊಡ್ಡ ಶಾಪವೂ ಹೌದು. ಒಮ್ಮೆ ಕೆಲಸ ನೀಡಿದವರು ಮತ್ತೆ ಕೆಲಸ ನೀಡೇ ಬಿಡುತ್ತಾರೆ ಎಂಬ ಖಚಿತತೆ ಯಾರಿಗೂ ಇರುವುದಿಲ್ಲ. ಅಷ್ಟಲ್ಲದೇ, ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲವಾದರೆ, ಇದರ ಪರಿಣಾಮ ಮೊದಲು ಫ್ರೀಲಾನ್ಸಿಂಗ್ ಮಾಡುವವರ ಮೇಲಾಗುತ್ತದೆ. ಹಾಗಾಗಿ  ಸ್ವ ಉದ್ಯೋಗ ಆರಂಭಿಸಿದ ಬಳಿಕ ಏನಾದರೂ ಸಮಸ್ಯೆ ಉಂಟಾದರೆ, ಕುಟುಂಬ ಬೀದಿಗೆ ಬೀಳದಂತೆ ನೋಡಿಕೊಳ್ಳಲು ಸೂಕ್ತ ಹಣ ಕೂಡಿಡುವುದು ಒಳಿತು. ಖಾಲಿ ಕೈಯಲ್ಲಿ ಕೆಲಸ ಆರಂಭಿಸಿ, ನಷ್ಟ ಸಂಭವಿಸಿದರೆ, ಇದರ ಪರಿಣಾಮ ನೇರವಾಗಿ ಕುಟುಂಬದ ಮೇಲಾದೀತು.
  6. ನಕಾರಾತ್ಮಕ ಮಾತುಗಳಿಗೆ ಮನಸು ಕೊಡಬೇಡಿ: ಫ್ರೀಲಾನ್ಸಿಂಗ್ ಎಂದರೆ ಸಂಪೂರ್ಣ ಜವಾಬ್ದಾರಿ ಒಬ್ಬರ ಮೇಲೆ ಇರುತ್ತದೆ. ಇದರಿಂದ ಪ್ರತಿ ಗ್ರಾಹಕರನ್ನು ತೃಪ್ತಿಗೊಳಿಸುವುದು ಅಷ್ಟು ಸುಲಭವಲ್ಲ. ಕೆಲವರು ತೀಕ್ಷ್ಣ ಮಾತುಗಳಿಂದ ಪ್ರತಿಕ್ರಿಯಿಸುವ ಸಾಧ್ಯತೆಗಳಿರುತ್ತದೆ. ಈ ಸಂದರ್ಭದಲ್ಲಿ ಮನಸನ್ನು ಕುಗ್ಗಿಸಿಕೊಳ್ಳದೇ, ಮುನ್ನೆಡೆಯುವ ಛಾತಿ ಹೊಂದಬೇಕು. ಮನಸು ಘಾಸಿಗೊಳ್ಳದಂತೆ ಎಚ್ಚರವಹಿಸಬೇಕು.
  7. ವಿಭಿನ್ನವಾಗಿ ಪ್ರಯತ್ನ ಮುಂದುವರಿಯಲಿ: ಫ್ರೀಲಾನ್ಸಿಂಗ್ ಆರಂಭಿಸಿದಾಗ ಮೊದಲ ಪ್ರಯತ್ನಕ್ಕೆ ಯಶಸ್ಸು ಸಿಗುವುದು ಕಷ್ಟಸಾಧ್ಯ. ಒಂದು ಪ್ರಯತ್ನ ವಿಫಲವಾದಲ್ಲಿ, ಬೇರೆ ರೀತಿಯ ಪ್ರಯತ್ನ ಮುಂದುವರಿಸಿ. ಒಂದು ವೇದಿಕೆಯಲ್ಲಿ ಅವಕಾಶ ಲಭಿಸದಿದ್ದರೆ, ಬೇರಾವ ದಾರಿಗಳಿವೆ ಎಂದು ಶೋಧ ಮುಂದುವರಿಯುತ್ತಿರಲಿ.  
  8. ವಿಫಲತೆಗೆ ಕಾರಣ ಹುಡುಕಿ: ಪ್ರತಿ ಹೆಜ್ಜೆಯಲ್ಲೂ ವಿಫಲತೆ ಎಂಬುದು ಸಾಮಾನ್ಯ. ಆದರೆ, ಆ ವಿಫಲತೆಗೆ ಕಾರಣ ಏನು ಎಂಬ ಪ್ರಶ್ನೆಗೆ ನಿಮ್ಮಲ್ಲಿ ಉತ್ತರ ಇರಲಿ. ಈ ವಿಫಲತೆ ಹಾಗೂ ಅದರ ಕಾರಣಗಳನ್ನು ಇತರರಿಗೆ ಮನವರಿಕೆ ಮಾಡಿಕೊಡಬೇಕೆಂದಿಲ್ಲ. ನಿಮ್ಮ ಮನಸಿಗೆ ಸಮಾಧಾನ ತಂದುಕೊಟ್ಟರೂ ಸಾಕು. ಆದರೆ, ಕಾರಣಗಳು ತಿಳಿದಿರಲಿ. ಮುಂದೆ ಆ ತಪ್ಪಾಗದಂತೆ ನೋಡಿಕೊಳ್ಳಲು ಪರಿಹಾರವನ್ನು ಹುಡುಕಿಟ್ಟುಕೊಳ್ಳಿ.
  9. ಸೋಲೇ ಗೆಲುವಿನ ಸೋಪಾನ: ಎಲ್ಲ ಕ್ಷೇತ್ರಗಳಲ್ಲಿ ಕಾಲಿಟ್ಟಾಕ್ಷಣ ಗೆಲುವು ಲಭಿಸಲೇ ಬೇಕು ಎಂದಿಲ್ಲ. ಅವುಗಳಿಂದ ಹಲವು ಪಾಠಗಳನ್ನು ಕಲಿಯಬಹುದು. ಆದರೆ, ಸೋಲಾಯಿತೆಂದು ಪ್ರಯತ್ನ ಬಿಡುವುದು ಬೇಡಿ. ಪ್ರಯತ್ನ ಮುಂದುವರಿಯುತ್ತಿದ್ದರೆ, ಸೋಲನ್ನೇ ಅಡಿಪಾಯ ಮಾಡಿಕೊಂಡು ಗೆಲುವಿನತ್ತ ಹೆಜ್ಜೆ ಹಾಕಬಹುದು. 

ಈ ಸೂತ್ರಗಳು ಪ್ರತಿ ಕ್ಷೇತ್ರಕ್ಕೂ ಅಳವಡಿಕೆ ಆಗಲೇಬೇಕೆಂದಿಲ್ಲ. ಆಯಾ ಕ್ಷೇತ್ರಗಳಲ್ಲಿ ಆದ್ಯತೆಗಳು ಬದಲಾಗಿರುತ್ತದೆ. ಗ್ರಾಹಕರಿಗೆ ತಕ್ಕಂತೆ ಬೇಡಿಕೆಗಳು ವಿಭಿನ್ನವಾಗಿರುತ್ತದೆ. ಪ್ರತಿಯೊಬ್ಬರ ಕಾರ್ಯ ವೈಖರಿಯೂ ಬೇರೆಯದ್ದಾಗಿರುತ್ತದೆ. ಒಬ್ಬರಿಗೆ ಸಹಕಾರಿಯಾದ ಅಂಶ ಇನ್ನೊಬ್ಬರಿಗೆ ಪೂರಕವಾಗಿರಲೇಬೇಕೆಂದಿಲ್ಲ. ಹಾಗಾಗಿ ಈ ಕ್ಷೇತ್ರದಲ್ಲಿ ಕಾಲಿಡಬೇಕು ಎಂದು ಮನಸು ಮಾಡಿದರೆ, ಅದಕ್ಕೆ ತಕ್ಕಂತೆ ತಯಾರಿ ನಡೆಸಿ ಯಶಸ್ಸಿನತ್ತ ಮುನ್ನುಗ್ಗಬಹುದು.

ಕೊನೆಯ ಸಾಲು: ಒಮ್ಮೆ ಫ್ರೀಲಾನ್ಸಿಂಗ್ ಕ್ಷೇತ್ರದಲ್ಲಿ ಧುಮುಕಿ, ಈಜಿದ ಬಳಿಕವೇ ಅದರ ಆಳ ಹಾಗೂ ಅಗಲದ ಬಗ್ಗೆ ಮಾಹಿತಿ ಸಿಗುತ್ತದೆ. ಅದರಂತೆ ಪ್ರತಿಯೊಬ್ಬರ ಯಶಸ್ಸಿಗೂ ಸೂತ್ರಗಳು ಬೇರೆ ಬೇರೆಯಾಗಿರುತ್ತದೆ. ಆ ಸೂತ್ರಗಳನ್ನು ಇನ್ನೊಬ್ಬರ ನಕಲು ಮಾಡದೇ ಸ್ವಂತ ಅನುಭವದಿಂದ ಕಟ್ಟಿಕೊಂಡರೆ ಯಶಸ್ಸಿನ ದಾರಿ ಇನ್ನಷ್ಟು ಹತ್ತಿರವಾಗಿರುತ್ತದೆ.

ಚೈತ್ರ ಎಲ್ ಹೆಗಡೆ

Read Previous

ವಿಶ್ವ ಸುಂದರಿಯ ಸ್ಪರ್ಧೆಗಳು ಇನ್ನು ಮುಕ್ತ ಮುಕ್ತ…

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Most Popular