ನ್ಯೂ ಇಯರ್ ರೆಸೆಲ್ಯೂಷನ್ ಯಾಕೆ ಫೇಲ್ ಆಗುತ್ತೆ ಗೊತ್ತಾ?

ದಿನನಿತ್ಯದ ಜಂಜಾಟದ ನಡುವೆ ಮಾಡದೇ ಬಿಟ್ಟಿರುವ ಕೆಲಸಗಳ ಪಟ್ಟಿ ಬೆಳೆಯುತ್ತಿರುತ್ತವೆ. ಕೆಲವಷ್ಟು ಮರೆತಿರುತ್ತೇವೆ. ಇನ್ನು ಹಲವಷ್ಟು ಮಾಡಲು ಮನಸು ತೋರಿರುವುದಿಲ್ಲ. ಕೆಲಸದ ಹೊರತಾಗಿ ಒಂದಿಷ್ಟು ಕನಸುಗಳು ಹಾಗೂ ಕೆಲಸಗಳು ಸಂಕಲ್ಪದ ರೂಪದಲ್ಲಿ ಎದಿರುಗಿರುತ್ತವೆ.  

ಅದರಲ್ಲೂ ಹೊಸ ವರ್ಷ ಬರುತ್ತಿದೆಯೆಂದರೆ, ತೂಕ ಕಡಿಮೆ ಮಾಡಬೇಕು, ಜಿಮ್ ಹೋಗಬೇಕು, ಆರೋಗ್ಯದ ಕಾಳಜಿ ವಹಿಸಬೇಕು, ಬಂದಿರುವ ಸಂಬಳದಲ್ಲಿ ಒಂದಿಷ್ಟು ಎತ್ತಿಟ್ಟು ಕೂಡಿಡಬೇಕು, ಚಟಗಳನ್ನೆಲ್ಲ ಕಡಿಮೆ ಮಾಡಬೇಕು ಎಂಬ ಒಂದಿಲ್ಲೊಂದು ಸಂಕಲ್ಪ ಮಾಡಿರುತ್ತೇವೆ. ಆದರೆ, ಸಂಭ್ರಮಾಚರಣೆ ಮರೆಯಾಗುವ ಮುನ್ನವೇ ಸಂಕಲ್ಪವೂ ಎಲ್ಲೋ ಕಳೆದು ಹೋಗಿರುತ್ತದೆ. 

ಒಂದು ಸಮೀಕ್ಷೆಯ ಪ್ರಕಾರ ನ್ಯೂ ಇಯರ್ ರೆಸೆಲ್ಯೂಷನ್ ತೆಗೆದುಕೊಂಡವರಲ್ಲಿ ಶೇ.92ರಷ್ಟು ಸೋಲುತ್ತಾರಂತೆ. ಶೇ. 8ರಷ್ಟು ಮಂದಿ ಮಾತ್ರ ಸಂಕಲ್ಪವನ್ನು ವರ್ಷ ಮುಗಿಯುವವರೆಗೂ ಮುಂದುವರೆಸಿಕೊಂಡು ಬಂದು ಯಶಸ್ಸನ್ನು ಕಾಣುತ್ತಾರಂತೆ. ಈ ಸಂಕಲ್ಪಗಳು ಯಶಸ್ಸು ಕಾಣದೇ ಇರೋಕೆ ನಿಜವಾದ ಕಾರಣಗಳು ಯಾವುದು ಗೊತ್ತಾ?

ಸಂಕಲ್ಪಗಳು ಗುರಿಮುಟ್ಟದೇ ಇರಲು ಕಾರಣಗಳು 

 • ಸಿದ್ಧತೆ ಇಲ್ಲದಿರುವುದು: ಯಾವುದೇ ಕೆಲಸ ಆರಂಭಿಸುವುದಕ್ಕೂ ಮುನ್ನ ಸೂಕ್ತ ಸಿದ್ಧತೆ ಇದ್ದರೆ ಕೆಲಸ ಮಗಿಸುವುದು ಸುಲಭ. ಇಲ್ಲದೇ ಹೋದಲ್ಲಿ ಆ ಕೆಲಸ ಕೈಗೂಡುವುದೇ ಅನುಮಾನವಾಗಿ ಹೋಗುತ್ತದೆ. ಅದೇ ರೀತಿಯಲ್ಲಿ ಸಂಕಲ್ಪಗಳಿಗೂ ಸರಿಯಾದ ಸಿದ್ಧತೆ ಬೇಕಾಗುತ್ತದೆ. ರಾತ್ರೋ ರಾತ್ರಿ ಮನದಲ್ಲಿ ಸಂಕಲ್ಪ ಮಾಡಿದರೆ, ಬೆಳಗಾಗುವಷ್ಟರಲ್ಲಿ ಕೈಗೂಡುವುದಿಲ್ಲ.
 • ಗುರಿ ಇಲ್ಲದಿರುವುದು: ಯಾವುದೇ ಸಂಕಲ್ಪ ಮಾಡುವುದಕ್ಕೂ ಮುನ್ನ ಒಂದು ಗುರಿ ಹೊಂದಿವುದು ಅತ್ಯಗತ್ಯ. ಸ್ನೇಹಿತರು ಮಾಡುತ್ತಿದ್ದಾರೆ ಎಂದೋ, ಪಕ್ಕದ ಮನೆಯವರು ಮಾಡುತ್ತಿದ್ದಾರೆ ಎಂದೋ ಅಥವಾ ಎಲ್ಲರೂ ಒಂದಲ್ಲ ಒಂದು ರೆಸೆಲ್ಯೂಷನ್ ಮಾಡಿಕೊಂಡಿದ್ದಾರೆ ಎಂದು ಸಂಕಲ್ಪ ಹೊಂದುವುದು ನಿಜಕ್ಕೂ ಸಮಂಜಸವಲ್ಲ. ಇದರಿಂದಾಗಿ ಸೆಲೆಬ್ರೆಷನ್ ಮಾಡುತ್ತಿರುವ ಮುನ್ನವೇ ನ್ಯೂ ಇಯರ್ ರೆಸೆಲ್ಯೂಷನ್ ಮರೆತು ಹೋಗುವ ಸಾಧ್ಯತೆಗಳಿರುತ್ತದೆ.   
 • ಕೈಲಾಗುವುದಕ್ಕಿಂತ ಹೆಚ್ಚಿನ ಗುರಿ ಹೊಂದಿರುವುದು: ಸಂಕಲ್ಪದ ಆರಂಭದಲ್ಲಿ ಅತ್ಯುತ್ಸಾಹ ಸಮಾನ್ಯ. ಆದರೆ, ಆ ಅತ್ಯುತ್ಸಾಹ ವರ್ಷಪೂರ್ತಿ ಕೆಲಸ ಮಾಡದು. ಇದರಿಂದಾಗಿ ಕೈಲಾಗುವುದಕ್ಕಿಂತ ದೊಡ್ಡದಾಗಿರುವ ಸಂಕಲ್ಪ ಹೊತ್ತು, ಪಶ್ಚಾತಾಪ ಪಡುವವರೇ ಹೆಚ್ಚು. 
 • ಬಹುಬೇಗ ತಾಳ್ಮೆ ಕಳೆದುಕೊಳ್ಳುವುದು: ಉತ್ತಮ ಫಲಿತಾಂಶ ಹೊಂದಲೆಂದೇ ಸಂಕಲ್ಪ ಹೊಂದುವುದು ಸಹಜ. ಆದರೆ, ಆರಂಭದಲ್ಲೇ ವಿಘ್ನಗಳು ಉಂಟಾದರೆ ಅಥವಾ ವಿಫಲತೆಯ ಚಿಹ್ನೆಗಳು ಘೋಚರಿಸಿದರೆ, ಅದನ್ನು ಅರ್ಧದಲ್ಲೇ ಮೊಟುಕುಗೊಳಿಸುವರೇ ಹೆಚ್ಚು. 
 • ಹೊಣೆಗಾರಿಕೆ ಇಲ್ಲದಿರುವುದು: ಸಂಕಲ್ಪವನ್ನು ಆರಂಭಿಸಿದಾಗ ಕೆಲಸ ಮಾಡುವುದು ಸುಲಭ. ಆದರೆ ದಿನಗಳೆದಂತೆ ಸಂಕಲ್ಪದ ಕುರಿತಾಗಿರುವ ಆಸಕ್ತಿ ಕಡಿಮೆಯಾಗುತ್ತಾ ಹೋಗುತ್ತದೆ. ತೆಗೆದುಕೊಂಡಿರುವ ಸಂಕಲ್ಪದ ಕುರಿತು ಯಾರಾದರೂ ಪ್ರಶ್ಮೆ ಮಾಡುತ್ತಿದ್ದರೆ ಅಥವಾ ಅದರ ಕುರಿತು ಮಾಹಿತಿ ಪಡೆವವರು ಇದ್ದರೆ, ಆಸಕ್ತಿ ಹಸಿರಾಗಿರುತ್ತದೆ
 • ಇತರ ಕಾರಣಗಳು: ಸಂಕಲ್ಪ ಮಾಡುವ ಸಮಯದಲ್ಲಿ, ಅದಕ್ಕೆ ಅಗತ್ಯವಿರುವ ಖರ್ಚಿನ ಬಗ್ಗೆ ಲೆಕ್ಕ ಹಾಕುವುದಿಲ್ಲ. ಸಂಕಲ್ಪಕ್ಕೆ ಅಗತ್ಯವಿರುವ ಸಮಯದ ಕುರಿತು ಲೆಕ್ಕ ಹಾಕುವುದಿಲ್ಲ. ಅಷ್ಟಲ್ಲದೇ ಅಗತ್ಯವಿರುವ ಪ್ರಾಮುಖ್ಯತೆ ನೀಡದೇ ಸಂಕಲ್ಪಗಳು ಹಳ್ಳ ಹಿಡಿಯುವುದು ಹೆಚ್ಚು. 

ಇಷ್ಟೆಲ್ಲ ನಕಾರಾತ್ಮಕ ಅಂಶಗಳನ್ನು ಪರಿಗಣಿಸಿದ ಮೇಲೆ ಹೊಸ ವರ್ಷದ ಸಂದರ್ಭದಲ್ಲಿ ಸಂಕಲ್ಪ ಮಾಡುವುದೇ ತಪ್ಪು ಎನ್ನಿಸದೇ ಇರದು. ಆದರೆ ಸರಿಯಾದ ಮಾರ್ಗದಲ್ಲಿ ಸಂಕಲ್ಪ ಕೈಗೊಂಡರೆ, ಬದುಕಿನಲ್ಲಿ ಹೊಸ ಕಿರಣ ಮೂಡದೇ ಇರದು. ಹೊಸ ವರ್ಷದ ಸಂಕಲ್ಪ ಯಶಸ್ವಿಯಾಗಲು ಸರಳ ಸೂತ್ರಗಳು ಇಲ್ಲಿವೆ. 

ಸಂಕಲ್ಪಕ್ಕೆ ಸರಳ ಸೂತ್ರಗಳು

 • ಅಗತ್ಯ ಯೋಜನೆ ಸಿದ್ಧಪಡಿಸಿಕೊಳ್ಳಿ: ಅಂದರೆ ಆರೋಗ್ಯದ ಕಾಳಜಿ ಮಾಡಬೇಕೆಂದಿದ್ದರೆ, ಕಾಳಜಿ ಹೆಗೆಲ್ಲ ಇದ್ದರೆ ಅನುಕೂಲ ಎಂಬುದನ್ನು ಯೋಚಿಸಿ. ಯೋಗ ಕ್ಲಾಸ್ ಅಥವಾ ಜಿಮ್ ಗೆ ತೆರಳಬೇಕೆಂದರೆ ಯಾವ ದಿನ ಹೋಗಬೇಕು, ಅದಕ್ಕೆ ಅಗತ್ಯವಿರುವ ಸಮಯ ಮೀಸಲಿಡುವುದು ಸಾಧ್ಯೆವೇ ಎಂಬುದರ ಕುರಿತು ಸವಿವರವಾಗಿ ಚಿಂತಿಸಿ ತಿರ್ಮಾನ ತೆಗೆದುಕೊಳ್ಳಿ. 
 • ಸರಿಯಾದ ಗುರಿ ರೂಪಿಸಿಕೊಳ್ಳಿ: ಯಾವುದೇ ಸಂಕಲ್ಪ ಮಾಡುವ ಮುನ್ನ ಯಾವ ಕಾರಣಕ್ಕಾಗಿ ಸಂಕಲ್ಪ ಮಾಡಿದ್ದೇವೆ, ಇದರ ಪರಿಣಾಮಗಳೇನು, ಇದರಿಂದ ಆಗುವ ಲಾಭ ಮತ್ತು ನಷ್ಟಗಳೇನು ಸೇರಿದಂತೆ ಅದರ ಸುತ್ತ ಮುತ್ತಲಿನ ಎಲ್ಲ ಅಂಶಗಳನ್ನು ಸರಿಯಾಗಿ ಯೋಚಿಸಿ, ಒಂದು ಗುರಿ ರೂಪಿಸಿ. ಇದರಿಂದ ನೀವು ಯಾವ ಪಥದಲ್ಲಿ ಸಾಗಬೇಕು ಎಂಬುದು ಸ್ಪಷ್ಟವಾಗಿರುತ್ತದೆ. 
 • ಪುಟ್ಟ ಪುಟ್ಟ ಹೆಜ್ಜೆ ಇಡಿ: ದೊಡ್ಡದಾಗಿರುವ ಗುರಿ ಸಾಧಿಸುವ ಮುನ್ನ ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಡುವುದನ್ನು ಕಲಿಯಿರಿ. ಅಂದರೆ, ಆರಂಭದಲ್ಲೇ ಎಲ್ಲವನ್ನು ಮಾಡಿ ಮುಗಿಸಬೇಕು ಎಂಬ ತರಾತುರಿಗಿಂತ ಸ್ವಲ್ಪ ಸ್ವಲ್ಪವೇ ಕೆಲಸ ಸಾಧಿಸುತ್ತ ದೊಡ್ಡ ಗುರಿಯನ್ನು ತಲುಪುವ ದಾರಿ ನಿಮ್ಮದಾಗಿಸಿಕೊಳ್ಳಿ.
 • ಮರಳಿ ಪ್ರಯತ್ನವ ಮಾಡಿ: ಒಮ್ಮೊಮ್ಮೆ ಸಂಕಲ್ಪಗಳು ವಿಫಲತೆಯ ಹಾದಿ ಹಿಡಿಯುವುದು ಸಾಮಾನ್ಯ. ಹಾಗೆಂದು ಮರಳಿ ಪ್ರಯತ್ನವನ್ನು ಮಾಡುತ್ತಿದ್ದರೆ, ಅಂದುಕೊಂಡಿರುವುದನ್ನು ಸಾಧಿಸುವುದು ಕಷ್ಟವೇನಲ್ಲ. ಸ್ವಲ್ಪ ತಾಳ್ಮೆ ಇಟ್ಟು ಶ್ರಮಿಸಿದರೆ, ಸಂಕಲ್ಪವನ್ನು ವರ್ಷಪೂರ್ತಿ ಕಾಪಾಡಿಕೊಂಡು ಬರಬಹುದು. 
 • ಸಮಾನಮನಸ್ಕರ ಜೊತೆಗೂಡಿ: ಯಾವುದೇ ಕೆಲಸವನ್ನು ಒಬ್ಬರೇ ನಿಂತು ಮಾಡುವುದಕ್ಕಿಂತ ಜೊತೆಗೂಡಿ ಮಾಡಿದರೆ ಅದರ ಫಲಿತಾಂಶ ಉತ್ತಮವಾಗಿರುತ್ತಿದೆ. ಅದರಂತೆ ನ್ಯೂ ಇಯರ್ ರೆಸೆಲ್ಯೂಷನ್ ಮಾಡುವಾಗ ಇನ್ನಾರಾದರೂ ಅದೇ ಸಂಕಲ್ಪ ಮಾಡಿದ್ದರೆ, ಜೊತೆಗೂಡಿ ಕಾರ್ಯ ನಿರ್ವಹಿಸಿ. ಇದರಿಂದ ಒಬ್ಬರು ಮಾಡದಿರುವ ಸಂದರ್ಭದಲ್ಲಿ ಇನ್ನೊಬ್ಬರು ಕಿವಿ ಹಿಡಿದು ಕೆಲಸ ಮಾಡುವಂತಿದ್ದರೆ, ವರ್ಷಪೂರ್ತಿ ಸಂಕಲ್ಪವನ್ನು ಕಾಯ್ದುಕೊಳ್ಳಬಹುದು. 
 • ಇತರ ಹೆಜ್ಜೆಗಳು: ಸಂಕಲ್ಪ ಮಾಡುವ ಮುನ್ನ ಅಗತ್ಯಕ್ಕಿಂತ ಸ್ವಲ್ಪ ಹೆಚ್ಚಿನ ಹಣ, ಸಮಯ ಹಾಗೂ ತಾಳ್ಮೆಯನ್ನು ಮೀಸಲಿಡಲು ತೀರ್ಮಾನಿಸಿ. ಇದರಿಂದ ಯಾವುದೇ ಅಂಶ ಕಡಿಮೆ ಬಿದ್ದರೂ, ಸಂಕಲ್ಪ ನಿಲ್ಲದೇ ಸಾಗುತ್ತಿರುತ್ತದೆ. 

ಕೊನೆಯ ಮಾತು: ಕೆಲವೊಂದು ಪುಟ್ಟ ಪುಟ್ಟ ಅಂಶಗಳು ಅತಿದೊಡ್ಡ ಫಲಿತಾಂಶವನ್ನು ನೀಡುತ್ತವೆ. ಅದರಂತೆ ಕೆಲವು ಸಂದರ್ಭಗಳಲ್ಲಿ ತೆಗೆದುಕೊಂಡ ನಿರ್ಧಾರ ಜೀವನವನ್ನೇ ಸುಧಾರಿಸುತ್ತದೆ. ಜೀವನ ಸುಧಾರಿಸಲು ಕೈಗೊಳ್ಳುವ ಸಂಕಲ್ಪ ಹೊಸ ವರ್ಷದ ಸಂದರ್ಭದಲ್ಲೇ ಕೈಗೊಳ್ಳಬೇಕೆಂದಿಲ್ಲ. ಸಂಕಲ್ಪ ಕೈಗೊಂಡ ಪ್ರತಿ ಘಳಿಗೆಯೂ ಶುಭ ಮುಹೂರ್ತದಿಂದಲೇ ಕೂಡಿರುತ್ತದೆ. ಹಾಗಾಗಿ ಉತ್ತಮ ಕೆಲಸಕ್ಕೆ ಹೊಸ ವರ್ಷವನ್ನೇ ಕಾಯುವ ಅವಶ್ಯಕತೆ ಇಲ್ಲ. ಬದುಕು ಬದಲಾಯಿಸುವ ಸಂಕಲ್ಪ ಕೈಗೊಳ್ಳಿ. ಅದರತ್ತ ಪುಟ್ಟ ಪುಟ್ಟ ಹೆಜ್ಜೆ ಇಡುವುದನ್ನು ಮರೆಯದಿರಿ. 

ಚೈತ್ರ ಎಲ್ ಹೆಗಡೆ

Read Previous

ಸಮ್ಮಿಲನ – Sammilana

Read Next

ಸತ್ವಪರೀಕ್ಷೆ – Satwapareekshe

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Most Popular