ಡೀಪ್‌ಫೇಕ್ ತಂತ್ರಜ್ಞಾನ – ಏನಿದರ ಮರ್ಮ?

     ಮೊಬೈಲ್ ಹಿಡಿದು ಓಡಾಡುತ್ತಿರುವ ಪ್ರತಿಯೊಬ್ಬರ ಬೆರಳ ತುದಿಯಲ್ಲಿ ಆಟವಾಡುತ್ತಿರುವ ಕೃತಕ ಬುದ್ದಿಮತ್ತೆ ಸಾಮಾನ್ಯರ ಜೀವನ ಅಲ್ಲೋಲ ಕಲ್ಲೋಲ ಮಾಡುವತ್ತ ದಾಪುಗಾಲಿಡುತ್ತಿದೆ. ಇತ್ತೀಚೆಗೆ ವೈರಲ್ ಆಗಿರುವ ರಶ್ಮಿಕಾ ಮಂದಣ್ಣ ಅವರ ವಿಡಿಯೋ ಒಂದು ಭೀಭತ್ಸ ಉದಾಹರಣೆ. 

    ಹಿಂದೆಲ್ಲ ಯಾರದ್ದೋ ಚಿತ್ರಕ್ಕೆ ಯಾರದ್ದೋ ಮುಖ ಬಳಸಿ ಛಾಯಾಚಿತ್ರ ತಯಾರಿಸಲಾಗುತ್ತಿತ್ತು. ಬಳಿಕ ಸುಳ್ಳು ಸುದ್ದಿ ಹರಿಬಿಟ್ಟು ಬಿಟ್ಟಿ ಪ್ರಚಾರ ಮತ್ತು ಲೈಕ್ಸ್ ಪಡೆಯಲಾಗುತ್ತಿತ್ತು. ಇದೀಗ ಅದರ ಮುಂದಿನ ಭಾಗವಾಗಿ ವೀಡಿಯೋಗಳು ಸೃಷ್ಠಿಯಾಗುತ್ತಿವೆ. ಅದು ಅಂತಿಂಥ ಚಿತ್ರಣಗಳಲ್ಲ. ಒಬ್ಬರ ಜೀವನವನ್ನೇ ಬುಡಮೇಲು ಮಾಡಬಹುದಾದಂಥಹ ವಿಡಿಯೋಗಳು. 

ಏನಿದು ಡೀಪ್‌ಫೇಕ್ ತಂತ್ರಜ್ಞಾನ? 

    ಕೃತಕ ತಂತ್ರಜ್ಞಾನ ಬಳಸಿ ಒಮ್ಮೆ ಚಿತ್ರಿಸಲಾದ ವಿಡಿಯೋದಲ್ಲಿ ಒಬ್ಬರ ಮುಖ ತೆಗೆದು, ಇನ್ನೊಬ್ಬರ ಮುಖ ಹಾಕಿ ಮಾರ್ಪಾಡು ಮಾಡಲಾಗುತ್ತದೆ. ವಿಡಿಯೋಗಳ ಮಾರ್ಫಿಂಗ್ ಎಷ್ಟು ನೈಜವಾಗಿರುತ್ತದೆ ಎಂದರೆ ಸಾಮಾನ್ಯರಿಗೆ ಅಸಲಿ ಮತ್ತು ನಕಲಿ ವಿಡಿಯೋಗಳ ವ್ಯತ್ಯಾಸ ಕಂಡು ಹಿಡಿಯುವುದು ಬಲುಕಷ್ಟ.

ಇಂಥಹ ತಂತ್ರಜ್ಞಾನಗಳು ಹೇಗೆ ತಯಾರಾಗುತ್ತವೆ?

    ಡೀಪ್‌ಫೇಕ್ ತಂತ್ರಜ್ಞಾನವನ್ನು ಡೀಪ್ ಟ್ರೇಸ್ ಎಂಬ ಸಂಸ್ಥೆ ತಯಾರಿಸಿದೆ. 2019ರಲ್ಲಿ ಆರಂಭವಾದ ಈ ತಂತ್ರಜ್ಞಾನ ಹೊಸತರಲ್ಲಿ ಏನೂ ಜನಪ್ರಿಯತೆ ಪಡೆದಿರಲಿಲ್ಲ. ಜೊತೆಗೆ ಆರಂಭದಲ್ಲಿ ಕೇವಲ ಕಾಲ್ಪನಿಕ ವಿಡಿಯೋ ಸೃಷ್ಠಿಸಲು ಬಳಸಲಾಗುತ್ತಿತ್ತು. ಎಐ ಬಳಸಿಕೊಂಡು ತಂತ್ರಜ್ಞಾನ ರೂಪಿಸುವ ಕಂಪನಿ ಇದೊಂದೇ ಇಲ್ಲ. ಇಂಥಹ  ಅನೇಕ ಕಂಪನಿಗಳು ಹಗಲು ರಾತ್ರಿ ಕೃತಕ ಬುದ್ದಿಮತ್ತೆ ಉಪಯೋಗಿಸಿಕೊಂಡು ಹಲವು ಉತ್ಪನ್ನಗಳನ್ನು ತಯಾರಿಸುತ್ತಲೇ ಇವೆ.  

    ಐಟಿ ದಿಗ್ಗಜ ಕಂಪನಿಗಳು ಪೈಪೋಟಿಗೆ ಬಿದ್ದು ಎಐ ಪ್ರೊಡಕ್ಟಗಳನ್ನು ತಯಾರಿಸುವಲ್ಲಿ ನಿರತರಾಗಿರುವ ಸುದ್ದಿ ಹೊಸತೇನಲ್ಲ.  ಉತ್ತಮ ಪ್ರೊಡಕ್ಟ್ ನೀಡುವ ಆತುರ ಹಾಗೂ ಹೊಸತನ್ನು ನೀಡುವ ಹುಮ್ಮಸ್ಸಿನೊಂದಿಗೆ ಡೀಪ್‌ಫೇಕ್ ಅಂಥಹ ತಂತ್ರಜ್ಞಾನಗಳು ತಯಾರಾಗುತ್ತಿವೆ.  ಫೇಸ್‌ಬುಕ್ ಅಂಥಹ ಜಾಲತಾಣಗಳಲ್ಲಿ ಸಾಮಾನ್ಯರು ತಮ್ಮ ಮಾಹಿತಿಯನ್ನು ಬಹಿರಂಗವಾಗಿ ಹರಿಬಿಟ್ಟಾಗ, ಅಂಥಹ ಮಾಹಿತಿಗಳನ್ನು ಸುಲಭವಾಗಿ ಹಾಗೂ ಉಚಿತವಾಗಿ ಬಳಸಿಕೊಂಡು ಎಐ ಪ್ರೊಡೆಕ್ಟ್ ತಯಾರಿಸಲಾಗುತ್ತವೆ.  ಡೀಪ್‌ಫೇಕ್ ಅಂಥಹ ಕುತೂಹಲಭರಿತ ಮತ್ತು ಆಸಕ್ತಿದಾಯಕ ತಂತ್ರಜ್ಞಾನಗಳನ್ನು ಸಾಮಾನ್ಯರಿಗೆ ಹರಿಬಿಟ್ಟಾಗ ಅದನ್ನು ಉಪಯೋಗಿಸುವವರ ಸಂಖ್ಯೆ ಹೆಚ್ಚಾಗಿ, ತಯಾರಿಸುವಂಥಹ ವ್ಯಕ್ತಿ ಅಥವಾ ಕಂಪನಿಗಳು ಅಧಿಕ ಲಾಭ ಪಡೆಯುತ್ತವೆ. ಹಾಗಾಗಿ ತಯಾರಕರು ಪರಿಣಾಮಗಳನ್ನು ಯೋಚಿಸದೇ, ಜನರನ್ನು ಆಕರ್ಷಿಸುವಂಥಹ ತಂತ್ರಜ್ಞಾನಗಳನ್ನು ಸೃಷ್ಠಿಸುವಲ್ಲಿ ನಿರತರಾಗಿದ್ದಾರೆ.  

ಡೀಪ್‌ಫೇಕ್ ಅಂಥಹ ತಂತ್ರಜ್ಞಾನದಿಂದ ಆಗುವ ಅನಾಹುತ ಅಷ್ಟಿಷ್ಟಲ್ಲ!

    ಡೀಪ್‌ಫೇಕ್ ಅಂಥಹ ತಂತ್ರಜ್ಞಾನಗಳಿಂದ ಯಾರೂ ಬೇಕಾದರೂ ಯಾವ ರೀತಿಯ ವಿಡಿಯೋವನ್ನಾದರೂ ಹರಿಬಿಡಬಹುದು. ಜ್ಞಾನವರ್ಧನೆಗಾಗಿ ಹೊಸ ತಂತ್ರಜ್ಞಾನ ನಿರ್ಮಿಸಿರುವುದಾಗ ತಯಾರಿಸಿರುವ ಸಂಸ್ಥೆ ಹೇಳುತ್ತದೆ. ಆದರೆ, ದ್ವೇಷಕ್ಕೆ, ಮೋಸಕ್ಕೆ ಬಳಸುವವರ ಸಂಖ್ಯೆಯೂ ಅಷ್ಟೇ ದೊಡ್ಡದಿದೆ ಎಂಬ ಸತ್ಯ ತಯಾರಿಸಿರುವ ಸಂಸ್ಥೆಗೆ ತಿಳಿಯದೇ ಏನೂ ಇಲ್ಲ. ಉತ್ತಮ ಕೆಲಸಕ್ಕಾಗಿ ಬಳಿಸಿರುವ ವಿಡಿಯೋಗಳ ಪರಿಣಾಮ ಹೇಳಿಕೊಳ್ಳುವಂಥಹ ಸಮಸ್ಯೆ ಏನೂ ತರದು. ಆದರೆ, ದ್ವೇಷ ಹಾಗೂ ಮೋಸಕ್ಕೆ ಬಳಸಿಕೊಳ್ಳುವಂಥಹ ವಿಡಿಯೋಗಳು ಉಂಟು ಮಾಡುವ ಪರಿಣಾಮ ಮಾತ್ರ ಭೀಕರ. ಒಬ್ಬರ ಬದುಕನ್ನು ಸರ್ವನಾಶ ಮಾಡಬಹದು. ಬಾಳನ್ನು ನರಕ ಸದೃಶ್ಯವಾಗಿಸಬಹುದು. ಏನೇ ಆದರೂ, ಪರಿಣಾಮ ಮಾತ್ರ ಸಾಮಾನ್ಯರು ಅನುಭವಿಸಬೇಕೇ ವಿನಃ, ಇಂಥಹ ತಂತ್ರಜ್ಞಾನಗಳನ್ನು ತಯಾರಿಸಿದವರು, ಕಠಿಣ ಪರಿಸ್ಥಿತಿಗಳಲ್ಲಿ ನುಣುಚಿಕೊಳ್ಳುವವರೇ ಹೆಚ್ಚು. 

    ಹೆಣ್ಣು ಮಕ್ಕಳ ಅಶ್ಲೀಲ  ವಿಡಿಯೋ ತಯಾರಿಸಬಹುದು. ಅಥವಾ ಯಾವುದೋ ಒಂದು ರಾಜಕೀಯ ಪಕ್ಷದ ವಿರುದ್ಧ ಅಪಪ್ರಚಾರ ಮಾಡಲು ವಿಡಿಯೋ ತಯಾರಿಸಿ ಹರಿಬಿಡಬಹುದು. ಅಥವಾ ಇನ್ನಾವುದೋ ಕೋಮಿನ ವಿರುದ್ಧವೂ ಅಸ್ತ್ರವಾಗಿಸಿಕೊಳ್ಳಬಹುದು. ಸಮಾಜದ ಶಾಂತ ಕದಡಲು ಕೂಡ ಸುಲಭವಾಗಿ ಬಳಸಿಕೊಳ್ಳಬಹುದು. 

ಡೀಪ್‌ಫೇಕ್ ಅಂಥಹ ತಂತ್ರಜ್ಞಾನದಿಂದ ಏನಾದರೂ ಲಾಭಗಳಿವೆಯೇ?

    ಡೀಪ್‌ಫೇಕ್ ತಂತ್ರಜ್ಞಾನವನ್ನು ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಿಗಾಗಿ ವಿಡಿಯೋ ಸೃಷ್ಠಿಸಲು ಬಳಸಲಾಗುತ್ತದೆ. ಸುದ್ದಿ ಚಾನೆಲ್ಲುಗಳಲ್ಲಾದರೆ, ದೊಡ್ಡ ತಂಡ ಕುಳಿತು ಅದೇ ಕೆಲಸ ಮಾಡುತ್ತಿರುತ್ತವೆ. ಹಾಗಿದ್ದಾಗ ಕೆಲಸಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಹಾಗೇ ವೀಕ್ಷಕರಿಗೆ ಬರಪೂರ ಮನೋರಂಜನೆ ಹಾಗೂ ಸುದ್ದಿ ಸಿಕ್ಕುತ್ತಲೇ ಇರುತ್ತವೆ. ಆದರೆ  ಯುಟ್ಯೂಬ್, ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಅಂಥಹ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮಾಡಬೇಕೆಂದರೆ ಒಬ್ಬರಿಂದ ಮಾಡಿ ಮುಗಿಸಲು ಸಾಧ್ಯವಿಲ್ಲ. ಈ ಸಾಮಾಜಿಕ ಜಾಲತಾಣಗಳಲ್ಲಿ  ಹೆ್ಚ್ಚೆಚ್ಚು ವೀವ್ಸ್ ಮತ್ತು ಹೆಚ್ಚೆಚ್ಚು ಲೈಕ್ಸ್ ಪಡೆಯುವ ಬರದಲ್ಲಿ ಪೈಪೋಟಿಗೆ ಬಿದ್ದು ವಿಡಿಯೋಗಳನ್ನು ತಯಾರಿಸಲೇಬೇಕು. ಮತ್ತು ಅದನ್ನು ಪ್ರಕಟಿಸುತ್ತಲೇ ಇರಬೇಕು. ಇಂಥಹ ಸಂದರ್ಭಗಳಲ್ಲಿ ಕಂಟೆಂಟ್ ಕ್ರಿಯೇಟ್ ಮಾಡುವವರಿಗೆ ಇದೊಂದು ವರದಾನ. 

    ಇತ್ತೀಚೆಗಷ್ಟೇ ಶಾರುಖ್ ಖಾನ್ ನಟಿಸಿರುವ ಡಾರ್ಕ್ ಫ್ಯಾಂಟಸಿ ಬಿಸ್ಕತ್ತಿನ ಜಾಹಿರಾತು ನೋಡಿದ್ದೀರಾ? ಇಲ್ಲವೆಂದರೆ ಅಂತರ್ಜಾಲದಲ್ಲಿ ಇಣುಕಿ ನೋಡಿ. ಈ ಜಾಹಿರಾತಿನಲ್ಲಿ ಶಾರುಖ್ ಖಾನ್ ಜೊತೆ ಅಭಿನಯಿಸುವ ಬಂಪರ್ ಅವಕಾಶ ಅಭಿಮಾನಿಗಳಿಗೆ ನೀಡಲಾಗಿದೆ. ಹಾಗೆಂದು ಶೂಟಿಂಗ್ ಏಲ್ಲಿ ನಡೆಯುತ್ತಿದೆ ಎಂದು ಹುಡುಕಿ ಹೊರಡಬೇಕೆಂದೇನೂ ಇಲ್ಲ. ಡಾರ್ಕ್ ಫ್ಯಾಂಟಸಿಯ ಕಂಪನಿಯು https://www.darkfantasyadwithsrk.in/ ತಾಣ ಸೃಷ್ಠಿಸಿದೆ. ಡಾರ್ಕ್ ಫ್ಯಾಂಟಸಿಯ ಈ  ಜಾಲತಾಣದಲ್ಲಿ ನಿಮ್ಮ ಫೋಟೋ ಹಾಕಿದರೆ ಸಾಕು, ಅದು ಶಾರುಖ್ ಖಾನ್ ಜೊತೆ ನಟಿಸಿದಂತೆ ಮಾರ್ಪಾಡು ಮಾಡಿ ನಿಮಗೆ ನೀಡುತ್ತದೆ. ಅಭಿಮಾನಿಗಳಿಗೆ ಶಾರುಖ್ ಜೊತೆ ಇರುವ ವಿಡಿಯೋ ಪಡೆದುಕೊಳ್ಳುವ ಆತುರ. ಡಾರ್ಕ್ ಫ್ಯಾಂಟಸಿ ಬಿಸ್ಕತ್ತಿಗೆ ಬಿಟ್ಟಿ ಪ್ರಚಾರ. ಹೇಗಿದೆ ಐಡಿಯಾ? ಆದರೆ ಈ ಐಡಿಯಾ ಹೀಗೆ ಉತ್ತಮ ಕೆಲಸಗಳಿಗೆ ಮಾತ್ರ ಉಪಯೋಗಿಸಿಕೊಂಡಿದ್ದರೆ ಅಷ್ಟೇನೂ ಸಮಸ್ಯೆ ಆಗುತ್ತಿರಲಿಲ್ಲ. ಆದರೆ, ವಾಸ್ತವದಲ್ಲಿ ಬೇರೆಯದೇ ರೀತಿಯಲ್ಲಿನ ಅನಾಹುತಗಳು ಹೆಚ್ಚುತ್ತಿವೆ. 

ಸಾಮಾನ್ಯ ಜನರ ಪಾಡೇನು?

    ದೊಡ್ಡ ದೊಡ್ಡ ವ್ಯಕ್ತಿಗಳ ಮುಖ ಬಳಸಿ ಕೃತಕ ವಿಡಿಯೋ ಸೃಷ್ಠಿಸಿದರೆ, ಕೂಡಲೇ ಎಚ್ಚೆತ್ತುಕೊಳ್ಳುವ ಸಂಬಂಧಪಟ್ಟ ಎಲ್ಲ ಇಲಾಖೆಗಳು ಅವುಗಳನ್ನು ಬೇಧಿಸುವಲ್ಲಿ ಯಶಸ್ವಿಯಾಗುವುದಂತೂ ಸುಳ್ಳಲ್ಲ. ಆದರೆ ಸಾಮಾನ್ಯರ ಜೀವನದಲ್ಲಿ ಕೃತಕ ತಂತ್ರಜ್ಞಾನ ಆಟವಾಡಿದರೆ ಬದುಕು ನರಕವಾಗುತ್ತದೆ. ಈಗಾಗಲೇ ಲಕ್ಷಕ್ಕೂ ಅಧಿಕ ವಿಡಿಯೋಗಳನ್ನು ಹರಿಬಿಡಲಾಗಿದೆ. 

    ಒಮ್ಮೆ ಯೋಚಿಸಿ! ಕಾಲೇಜಿನ ವಿದ್ಯಾರ್ಥಿನಿಯ ಫೋಟೋ ಬಳಸಿ ಇಂಥಹ ವಿಡಿಯೋ ಸೃಷ್ಠಿಸಿದರೆ, ಅವಳ ಗತಿಯೇನು? ವಿಡಿಯೋ ನೋಡುತ್ತಿದ್ದಂತೆ ಅವಳು ಅರ್ಧ ಸತ್ತಿರುತ್ತಾಳೆ. ಇನ್ನು ಒಬ್ಬ ಹುಡುಗ ಯಾವುದೋ ಒಂದು ಮತೀಯರ ವಿರುದ್ಧ ಮಾತನಾಡಿರುವಂತೆ ವಿಡಿಯೋ ಮಾಡಿ ಹರಿಬಿಟ್ಟರೆ ಆ ಹುಡುಗ ಮರುದಿನ ಜೀವಂತವಾಗಿ ಸಿಗುತ್ತಾನಾ? 

    ಇಂಥಹ ವಿಡಿಯೋಗಳು ಸೃಷ್ಠಿಯಾದಾಗ ಇದು ಅಸಲಿಯೋ ಅಥವಾ ನಕಲಿಯೋ ಎಂದು ಯೋಚಿಸವಷ್ಟು ವ್ಯವಧಾನ ಯಾರಿಗೂ ಇರುವುದಿಲ್ಲ. ಇನ್ನು ಅದರ ಸತ್ಯಾಸತ್ಯತೆ ಹುಡುಕಿ ಹೊರಡುವಷ್ಟರಲ್ಲಿ ನಡೆಯಬಾರದ ಅನಾಹುತಗಳು ನಡೆದಿರುತ್ತವೆ. ಡೀಪ್‌ಫೇಕ್ ಅಂಥಹ ಕೃತಕ ಬುದ್ದಿಮತ್ತೆ ಬಳಸಿ ತಯಾರಿಸುವ ತಂತ್ರಜ್ಞಾನಗಳ ಕುರಿತು ಒಮ್ಮೆ ಗಂಭೀರವಾಗಿ ಯೋಚಿಸಲೇಬೇಕಾದ ಸಮಯ ಬಂದಿದೆ. 

ನಮ್ಮ ಕಾನೂನು ಏನು ಹೇಳುತ್ತವೆ?

    ಸದ್ಯ ನಮ್ಮ ಕಾನೂನು ಸ್ಪಷ್ಟವಾಗಿ ಏನನ್ನೂ ಹೇಳುವುದಿಲ್ಲ. ಹೌದು. ತಂತ್ರಜ್ಞಾನ ಬೃಹದಾಕಾರವಾಗಿ ಬೆಳೆಯುತ್ತಿರುವಂತೆಯೇ ಅದರ ಸತ್ಯಾಸತ್ಯತೆಗಳನ್ನು ಅರ್ಥೈಸಿಕೊಂಡು ಅವುಗಳಷ್ಟೇ ಬೃಹದಾಕಾರವಾಗಿ ಕಾನೂನು ರೂಪಿಸುವುದು ತೀರಾ ಅಗತ್ಯವಾಗಿದೆ. ಇಂಥಹ ತಂತ್ರಜ್ಞಾನಗಳು ಜನಸಾಮಾನ್ಯರ ಮುಗ್ಧತೆಯನ್ನು ಬಳಸಿಕೊಂಡು ತಮ್ಮ ಜೇಬನ್ನು ತುಂಬಿಸಿಕೊಳ್ಳುತ್ತ, ಅವರ ಬದುಕಿಗೆ ಕೊಳ್ಳಿ ಇಡುವಂಥಹ ತಂತ್ರಜ್ಞಾನಗಳನ್ನೆಲ್ಲ ಗುರುತಿಸಿ ಕಡಿವಾಣ ಹಾಕಬೇಕಿದೆ. (ಆದರೆ ಕಾನೂನು ರೂಪಿಸಿವುದು ಕೂಡ ಸುಲಭದ ಮಾತಲ್ಲ.) ಅಷ್ಟೇ ಅಲ್ಲ ಕಠಿಣ ಕ್ರಮದ ಅವಶ್ಯಕತೆಯೂ ಇದೆ. ಯಾವುದಾದರೂ ಒಂದು ತಂತ್ರಜ್ಞಾನದ ಬಗ್ಗೆ ದೂರು ಬಂದರೆ, ಅಂಥಹ ಪ್ರಕರಣಗಳನ್ನು ದಶಕಗಳ ಕಾಲ ಜಗ್ಗದೇ, ಆರೋಪಿಗಳಿಗೆ ನುಣುಚಿಕೊಳ್ಳುವ ಅವಕಾಶ ನೀಡದೇ, ಮುಂದೆ ಇಂಥಹ ತಪ್ಪುಗಳು ನಡೆಯದಂತೆ ತಪ್ಪಿತಸ್ಥರ ವಿರುದ್ಧ ತಕ್ಷಣವೇ ಕ್ರಮ ಜರುಗಿಸಬೇಕಿದೆ. ಕನಿಷ್ಠ ಶಿಕ್ಷೆಯನ್ನು ನೀಡಿ ತಪ್ಪಿತಸ್ಥರನ್ನು ಪಾರಾಗಲು ಬಿಡುವ ಅವಕಾಶವೇ ಇಲ್ಲದಂತಿರಬೇಕು. ಅಂದಾಗ ಮಾತ್ರ ಸಾಮಾನ್ಯರ ಜೀವನವನ್ನು ಕೇವಲವಾಗಿ ತೆಗೆದಕೊಳ್ಳುವವರ ಸಂಖ್ಯೆ ಕಡಿಮೆಯಾಗಲಿದೆ. 

ಕೊನೆಯ ಮಾತು:  ಇಂಥಹ ಫೇಕ್ ತಂತ್ರಜ್ಞಾನಗಳಿಂದ ಬರೀ ಹೆಣ್ಣುಮಕ್ಕಳನ್ನಷ್ಟೇ ಅಲ್ಲ, ಗಂಡುಮಕ್ಕಳನ್ನು ಕಾಪಾಡಿಕೊಳ್ಳಬೇಕು. ಡೀಪ್‌ಫೇಕ್ ಅಂಥಹ ತಂತ್ರಜ್ಞಾನಗಳ ಕುರಿತು ಕೇವಲ ಸರ್ಕಾರ ಮತ್ತು ಕಾನೂನುಗಳಷ್ಟೇ ಎಚ್ಚೆತ್ತುಕೊಂಡರೆ ಸಾಲದು. ಯಾರೇ ಆಗಲಿ, ಉಚಿತವಾಗಿ ಲಭಿಸುವ ಕೃತಕ ಬುದ್ದಿಮತ್ತೆಯ ತಂತ್ರಜ್ಞಾನಗಳನ್ನು ಉಪಯೋಗಿಸುವುದಕ್ಕೂ ಮುನ್ನ ಅವುಗಳ ಅವಶ್ಯಕತೆ ಏಷ್ಟಿದೆ ಮತ್ತು ಅದರಿಂದಾಗುವ ಅನಾನುಕೂಲಗಳನ್ನು ಒಮ್ಮೆ ಕೂಲಂಕುಶವಾಗಿ ಪರಿಶೀಲಿಸಿ ಬಳಸಿಕೊಳ್ಳುವುದು ಒಳಿತು. 

ಅಂದಹಾಗೇ ಶಾರುಖ್ ಅಭಿಮಾನಿಯಾಗಿ ನನಗೂ ಡಾರ್ಕ್ ಫ್ಯಾಂಟಸಿ ಜಾಹಿರಾತಿನಲ್ಲಿ ಕಾಣಿಸಿಕೊಳ್ಳುವ ಆಸೆಯೇನೋ ಇತ್ತು. ಆದರೆ ನನ್ನ ಫೋಟೋವನ್ನು ಆ ತಾಣಕ್ಕೆ ಅಪ್ ಲೋಡ್ ಮಾಡಿದಾಗ, ನನ್ನ ಫೋಟೋವನ್ನು ತಾನು ನಿರ್ದಾಕ್ಷಿಣ್ಯವಾಗಿ ಉಪಯೋಗಿಸಿಕೊಳ್ಳುವುದಾಗಿ ಹೇಳುತ್ತಿತ್ತು. ಮತ್ತು ಅದಕ್ಕೆ ನನ್ನ ಪರ್ಮೀಷನ್ ಕೇಳುತ್ತಿತ್ತು. ಅದಕ್ಕಾಗಿ ನಾನೂ ಕೂಡ ನಿರ್ದಾಕ್ಷಿಣ್ಯವಾಗಿ ಆ ತಾಣದಿಂದ ಹೊರಬಂದೆ.

ಚೈತ್ರ ಎಲ್ ಹೆಗಡೆ

Read Previous

ಎಐ(AI): ನಿಮ್ಮ ಕೆಲಸ ಕಸಿದುಕೊಳ್ಳಲಿದೆಯೇ?

Read Next

ವಿಶ್ವ ಸುಂದರಿಯ ಸ್ಪರ್ಧೆಗಳು ಇನ್ನು ಮುಕ್ತ ಮುಕ್ತ…

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Most Popular