ಗ್ರಾಹಕರ ಖಾಸಗಿತನಕ್ಕೆ ಕನ್ನ ಹಾಕುತ್ತಿರುವ ತಂತ್ರಜ್ಞಾನ!

ಆಧುನಿಕ ತಂತ್ರಜ್ಞಾನದ ಪರಮಾವಧಿಯಿಂದ ಬೆರಳ ತುದಿಯಲ್ಲಿ ಜಗತ್ತಿನ ಮಾಹಿತಿಗಳೆಲ್ಲ ಕೈಗೆ ಸಿಗುತ್ತದೆ. ಮಾಹಿತಿಯಿಂದ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ತಂತ್ರಜ್ಞಾನ ಪ್ರತಿನಿತ್ಯದ ಅನಿವಾರ್ಯತೆಯಾಗಿ ಮಾರ್ಪಟ್ಟಿದೆ. 

ರಸ್ತೆ ಹುಡುಕಲು ಗೂಗಲ್ ಮ್ಯಾಪ್ ಸಹಾಯ ಮಾಡುತ್ತದೆ. ಎಲ್ಲೆಲ್ಲಿ ಏನೇನು ಶಾಪಿಂಗ್ ಮಾಡಬೇಕು ಎಂಬುದನ್ನು ಹಲವಾರು ಆ್ಯಪ್‌ಗಳು ಹೇಳುತ್ತವೆ. ದಿನನಿತ್ಯದ ಆಗುಹೋಗುಗಳನ್ನೆಲ್ಲ ನೆನಪಿಟ್ಟುಕೊಳ್ಳಲು ಕ್ಯಾಲೆಂಡರ್ ಸಹಾಯ ಮಾಡುತ್ತದೆ. ಇವೆಲ್ಲವುಗಳನ್ನು ಕೇವಲ ಕೆಲವು ಆ್ಯಪ್ ಸಹಾಯದಿಂದ ಉಚಿತವಾಗಿ ಮಾಡಬಹುದಾಗಿದೆ. 

ಈ ತಂತ್ರಜ್ಞಾನಗಳ ಬಳಕೆ ಅದೆಷ್ಟು ನಂಬಿಕೆಗೆ ಅರ್ಹವಾಗಿದೆ ಎಂಬುದು ಪ್ರಶ್ನಾರ್ಹವಾಗಿದೆ. ಏಕೆಂದರೆ ಒಬ್ಬ ವ್ಯಕ್ತಿ ಗೂಗಲ್ಲಿನಲ್ಲಿ ಏಷ್ಟು ಟ್ರಾಫಿಕ್ ಇದೆ ಎಂದು ನೋಡಿಕೊಂಡು ಕಚೇರಿಗೆ ತೆರಳಿ, ಅಲ್ಲಿ ಕ್ಯಾಲೆಂಡರಿನಲ್ಲಿ ಸೇವ್ ಆಗಿರುವ ಕಾರ್ಯಕ್ರಮಗಳನ್ನು ಮುಗಿಸಿಕೊಂಡು, ಅಲ್ಲೇ ಪಕ್ಕದಲ್ಲೇ ಇರುವ ಹೊಟೆಲ್ಲಿಗೆ ಹೋಗಿ ಊಟ ಮಾಡಿಕೊಂಡು, ನಂತರ ಸಂಜೆ ಮನೆಗೆ ಮರಳಿದರೆ, ಗೂಗಲ್ ಎಂಬ ದೈತ್ಯ ಕಂಪನಿಗೆ ಎಲ್ಲ ಮಾಹಿತಿಯೂ ರವಾನೆಯಾಗಿರುತ್ತದೆ. 

ಇಷ್ಟೇ ಅಲ್ಲ, ನಾವು ಯಾವ ರೀತಿಯ ವಿಡಿಯೋ ನೋಡುತ್ತಿರುತ್ತೀವಿ, ನಮ್ಮ ಅಭಿರುಚಿಗಳೇನು, ನಾವು ಏಲ್ಲಿಗೆ ಹೋಗುತ್ತಿರುತ್ತೀವಿ, ನಾವು ಏನೇನು ಶಾಪಿಂಗ್ ಮಾಡುತ್ತಿರುತ್ತೀವಿ ಎಂಬೆಲ್ಲ ಡೇಟಾಗಳು ನಮಗೆ ಗೊತ್ತಿಲ್ಲದೇ ಸಂಗ್ರಹಿಸುತ್ತಿರುತ್ತವೆ. ನಾವು ಉಚಿತವಾಗಿ ಹಾಗೂ ಹಣ ಕೊಟ್ಟು ಖರೀದಿಸಿದರು ಬಹುತೇಕ ಎಲ್ಲ ಆ್ಯಪ್‌ಗಳು ಮಾಹಿತಿಯನ್ನು ಕಲೆಹಾಕುತ್ತಿರುತ್ತವೆ.

ಮಾಹಿತಿ ಕಲೆ ಹಾಕುವ ಬಗೆ

ವೈಯಕ್ತಿಕವಾಗಿ ಪ್ರತಿಯೊಬ್ಬರ ಮಾಹಿತಿಯನ್ನು ಯಾರೊಬ್ಬರೋ ಕುಳಿತು ನೋಡುತ್ತಿರುವುದಿಲ್ಲ. ಇವುಗಳನ್ನು ಆರ್ಟಿಫಿಷಯಲ್ ಇಂಟಲಿಜೆನ್ಸಿ ಮುಖಂತಾರ ಮಾಡಲಾಗುತ್ತದೆ. ಅಂದರೆ, ಕಂಪ್ಯೂಟರಿನಲ್ಲಿ ಈ ಎಲ್ಲ ಮಾಹಿತಿ ಕಲೆ ಹಾಕುವಂತೆ ಪ್ರೋಗ್ರಾಮ್ ತಯಾರಿಸಲಾಗುತ್ತದೆ. ಇವುಗಳನ್ನು ಸಾಮಾನ್ಯವಾಗಿ ಎನ್ಕ್ರಿಪ್ಟೆಡ್ ಸ್ಕ್ರಿಪ್ಟ್ ಮಾಡಿ ಇಡಲಾಗುತ್ತದೆ. ಅಂದರೆ ಯಾರಾದರೂ ಈ ಕಂಪ್ಯೂಟರ್ ತೆಗೆದರೆ ಓದಲು ಸಾಧ್ಯವಾಗುವುದಿಲ್ಲ. 

ಗ್ರಾಹಕರ ವಯ್ಯಕ್ತಿಕ ಮಾಹಿತಿ ಕಲೆ ಹಾಕುವ ಕಾರಣ

ವೈಯಕ್ತಿಕ ಮಾಹಿತಿಯನ್ನು ಕಲೆ ಹಾಕಲು ಅನೇಕ ಕಾರಣಗಳಿವೆ. ಒಬ್ಬ ವ್ಯಕ್ತಿಯ ಅಭಿರುಚಿಗೆ ತಕ್ಕಂತೆ ಸಲಹೆಗಳನ್ನು ನೀಡಲು ಎಲ್ಲ ಮಾಹಿತಿಗಳನ್ನು ಕಲೆ ಹಾಕಲಾಗುತ್ತದೆ. ಬಹುಮುಖ್ಯವಾಗಿ ಯಾವುದೇ ಉತ್ಪನ್ನಗಳ ಜಾಹಿರಾತು ಪ್ರಕಟಣೆಗಾಗಿ ಈ ಮಾಹಿತಿಗಳ ಸಹಾಯ ಪಡೆಯಲಾಗುತ್ತದೆ. ಇಷ್ಟಲ್ಲದೇ, ತಮ್ಮ ತಮ್ಮ ಉತ್ಪನ್ನಗಳನ್ನು ಇನ್ನಷ್ಟು ಸುಧಾರಣೆ ಮಾಡುವ ನಿಟ್ಟಿನಲ್ಲಿಯೂ ಪ್ರತಿಯೊಬ್ಬ ಗ್ರಾಹಕರ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತದೆ.

ಮಾಹಿತಿ ಕಲೆ ಹಾಕುವುದರ ದುಷ್ಪರಿಣಾಮಗಳು

ಕಂಪನಿಗಳು ಹೇಳುವಂತೆ ತಮ್ಮ ಉತ್ಪನ್ನಗಳ್ನು ಸುಧಾರಣೆಗೆ ಹಾಗೂ ಜಾಹಿರಾತುಗಳನ್ನು ನೀಡಲು ಮಾತ್ರ ಈ ಮಾಹಿತಿಯನ್ನು ಉಪಯೋಗಿಸಿದರೆ ಸಮಸ್ಯೆ ಉಂಟಾಗದು. ವೈಯಕ್ತಿಕ ಮಾಹಿತಿಗಳಿಗೆ ಯಾರಾದರೂ ಕನ್ನ ಹಾಕಿ, ದುರುಪಯೋಗಪಡಿಸಿಕೊಂಡರೆ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಆಯಾ ದೇಶದ ಮಾಹಿತಿಗಳು ಆಯಾ ದೇಶದಲ್ಲೇ ಉಳಿದರೆ, ಅಷ್ಟು ಸಮಸ್ಯೆ ಆಗದು. ಆದರೆ, ನಮ್ಮ ದೇಶದ ಮಾಹಿತಿಗಳನ್ನು ಇನ್ಯಾವುದೋ ದೇಶಗಳಲ್ಲಿ ಸಂಗ್ರಹಿಸುತ್ತ, ಅವುಗಳನ್ನು ಶತ್ರು ದೇಶಗಳಿಗೆ ಮಾರಾಟ ಮಾಡುವ ಸಾಧ್ಯತೆಗಳು ಇವೆ. ಇಂದಿನ ದಿನಗಳಲ್ಲಿ ಸೈಬರ್ ಕ್ರೈಂ ಸಾಮಾನ್ಯವಾಗಿರುವುದರಿಂದ, ಕಿಂಚಿತ್ ಎಚ್ಚರ ತಪ್ಪಿದರೂ, ವೈಯಕ್ತಿಕ ನಷ್ಟವಲ್ಲದೇ, ದೇಶಕ್ಕೂ ಭದ್ರತೆಗೂ ನಷ್ಟ ಉಂಟಾಗುವ ಸಾಧ್ಯತೆಗಳಿರುತ್ತವೆ.

ಮಾಹಿತಿ ಕಲೆ ಹಾಕುವುದರ ಕುರಿತು ಕಾನೂನು

ಈಗಾಗಲೇ ಹಲವು ದೇಶಗಳಲ್ಲಿ ಕಂಪನಿಗಳು ತಂತ್ರಜ್ಞಾನ ಬಳಸಿ ಗ್ರಾಹಕರ ಮಾಹಿತಿ ಕಲೆ ಹಾಕುವುದರ ಕುರಿತು ಕಾನೂನು ರೂಪಿಸಲಾಗುತ್ತಿದೆ. ಆದರೆ, ತಂತ್ರಜ್ಞಾನದ ಕಬಂದ ಬಾಹುಗಳು ಅದೆಷ್ಟು ದೊಡ್ಡದಿವೆ ಎಂದರೆ, ಒಂದೇ ದೇಶ ಕುಳಿತು ಸಮಸ್ಯೆ ಬಗೆ ಹರಿಸುವಷ್ಟು ಸುಲಭವಾಗಿಲ್ಲ. ಹಾಗಾಗಿ, ಕಠಿಣ ಹಾಗೂ ಗ್ರಾಹಕರ ಸ್ನೇಹಿಯಾಗಿರುವ ಹೆಜ್ಜೆ ಇಡುವ ಅವಶ್ಯಕತೆ ಇದೆ.   

ಮಾಹಿತಿ ಕಲೆ ಹಾಕಲು ಕಡಿವಾಣ

ಬಳಕೆ ಮಾಡದೇ ಇರುವ ಆಪ್ ಅನ್ನು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರಿನಿಂದ ಕಿತ್ತೊಗೆಯಿರಿ. ಅನವಶ್ಯಕವಾಗಿ ಹುಡುಕಾಟ ನಡೆಸುವುದನ್ನು ನಿಲ್ಲಿಸಿ. ಯಾವುದೇ ಆ್ಯಪ್ ಬಳಸುವಾಗಲೂ ಗ್ರಾಹಕರ ಹಕ್ಕಿನ ಬಗ್ಗೆ ತಿಳಿದುಕೊಳ್ಳಿ. ಗೂಗಲ್ ಸೇರಿದಂತೆ ಹಲವೆಡೆ ನಿಮ್ಮ ಬಗ್ಗೆ ಕಲೆ ಹಾಕಿರುವ ಮಾಹಿತಿಗಳನ್ನು ಶಾಶ್ವತವಾಗಿ ಅಳಿಸಿ ಹಾಕುವ ಅವಕಾಶಗಳಿವೆ. ಮುಖ್ಯವಾಗಿ, ಮಾಹಿತಿ ಕಲೆ ಹಾಕುವ ಆ್ಯಪ್ ಬದಲಾಗಿ ಇರುವ ಪರ್ಯಾಯ ಆ್ಯಪ್‌ಗಳತ್ತ ಮುಖ ಮಾಡಿ. ಇದರಿಂದ ಮಾಹಿತಿ ಹೊರಹೋಗದೇ ಉಳಿಯುತ್ತದೆ ಹಾಗೂ ನಿಮ್ಮ ಖಾಸಗಿತನಕ್ಕೂ ಧಕ್ಕೆಯಾಗದು.

 

ಚೈತ್ರ ಎಲ್ ಹೆಗಡೆ

Read Previous

ಫ್ರೀಲಾನ್ಸಿಂಗ್ ಆರಂಭಿಸುವ ಮುನ್ನ ಏನೆಲ್ಲಾ ಯೋಚಿಸಬೇಕು?

Read Next

ಲವ್ ಎಟ್ ಫಸ್ಟ್ ಸೈಟ್ – Love at first sight

Most Popular