ಎಐ(AI): ನಿಮ್ಮ ಕೆಲಸ ಕಸಿದುಕೊಳ್ಳಲಿದೆಯೇ?

ಹೇಳಿರೋ ಕೆಲಸವನ್ನ ಪ್ರಶ್ನೆ ಮಾಡದೇ, ಸಂಬಳ ಎಷ್ಟು ಕೊಡ್ತೀರಾ ಅಂತ ಕೇಳ್ದೆ ಕ್ಷಣಾರ್ಧದಲ್ಲಿ ಕೆಲಸ ಮಾಡಿ ಮುಗ್ಸೋರು ನಮ್ ಎದ್ರಿಗೆ ಇದ್ರೆ ಬದುಕು ಎಷ್ಟು ಸುಲಭ ಆಗ್ತಿತ್ತು ಅಲ್ವಾ!!!. ಅಂಥಹ ದಿನಗಳೇನೂ ದೂರವಿಲ್ಲ. ಹೇಳಿದ ಕೆಲ್ಸ ಬಾಯ್ ಮುಚ್ಗೋಂಡು ಮಾಡೋಕೆ ಅಂತಾನೆ ಎಐ(AI) ಸಿದ್ದವಾಗ್ತಿದೆ. 

ಎಐ(AI) ಎದುರು ಹೋಗಿ ಒಂದು ಕಥೆ ಬರೆದುಕೊಡು ಅಂದ್ರೆ ಬರೆಯುತ್ತೆ, ಅದಕ್ಕೆ ತಕ್ಕಂತೆ ಚಿತ್ರವನ್ನು ಬಿಡಿಸು ಅಂದ್ರೆ, ಅಷ್ಟೇ ಸುಂದರ ಚಿತ್ರವನ್ನು ತಯಾರಿಸತ್ತೆ, ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಹಂಗೆ ಸಂಗೀತವನ್ನು ಸೃಷ್ಠಿ ಮಾಡು ಅಂದ್ರೆ ಅದನ್ನೂ ಮಾಡಿ ನಮ್ಮ ಕೈಗಿಡತ್ತೆ. ಇಷ್ಟರ ಮಟ್ಟಿಗೆ ಎಐ ತಯಾರಾಗಿ ನಿಂತಿದೆ. 

ಏನಿದು ಎಐ(AI)? 

ಎಐ ಅಥವಾ ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ ಎಂದರೆ ಕೃತಕ ಬುದ್ಧಿಮತ್ತೆ. ಹೆಸರೇ ಹೇಳುವಂತೆ ಮಾನವನ ಬುದ್ದಿಮತ್ತೆಯ ಕೃತಕ ಮುಖವಿದು. ಮಾನವ ಕೆಲಸಗಳು ಸುಲಭಗೊಳ್ಳಲೆಂದೇ ಆರಂಭವಾದ ಯಾಂತ್ರೀಕರಣದ ಮುಂದಿನ ಭಾಗವಾಗಿ ಮಾನವನ ಬುದ್ದಿಮತ್ತೆಯನ್ನು ನಕಲು ಮಾಡಿ ಅದನ್ನೇ ಕೆಲಸಕ್ಕೆ ಉಪಯೋಗಿಸಿಕೊಳ್ಳುವ ಚಾಣಾಕ್ಷ ನಡೆ.  

ಎಐ(AI) ಹೇಗೆ ತಯಾರಿಸಲಾಗಿದೆ?

ಅಂತರ್ಜಾಲ ಬಂದು ಹಲವು ದಶಕಗಳೇ ಕಳೆದಿವೆ. ಆರಂಭಿಕ ದಿನಗಳು ಅಲ್ಲದೇ ಹೋದರೂ, ಕಳೆದೊಂದು ದಶಕದಲ್ಲಿ ಗ್ರಾಹಕರು ಅಂತರ್ಜಾಲವನ್ನು ಯಥೇಚ್ಛವಾಗಿ ಬಳಸಿದ್ದಾರೆ. ಬಳಕೆಗೆ ತಕ್ಕಂತೆ ಉಚಿತವಾಗಿ ಜಾಲತಾಣಗಳು ಮತ್ತು   ಎಪ್‌ಗಳು  ಗ್ರಾಹಕರ ಕೈ ಸೇರಿದೆ. ಈ ಸಂದರ್ಭದಲ್ಲಿ ಗ್ರಾಹಕರ ನಡೆಯ ಮೇಲೆ, ನಡುವಳಿಕೆಯ ಮೇಲೆ, ನಿಲುವಿನ ಮೇಲೆ, ಅಭಿರುಚಿಯ ಮೇಲೆ ಹದ್ದಿನ ಕಣ್ಣೊಂದಿತ್ತು. ಇದಿಷ್ಟೇ ಸಾಲದೆಂಬಂತೆ, ಅವರ ಲಿಂಗ,  ವಯಸ್ಸು, ಅವರಿರುವ ಸ್ಥಳದ ಮಾಹಿತಿ ಕೂಡ ಆಯಾ ಕಂಪನಿಗಳು ತಮ್ಮೊಳಗೆ ಭದ್ರವಾಗಿಟ್ಟುಕೊಂಡಿವೆ. ಈ ಎಲ್ಲ ದತ್ತಾಂಶಗಳು ಕೃತಕಬುದ್ದಿಮತ್ತೆಯ ರೂಪದಲ್ಲಿ ಮತ್ತೆ ನಮ್ಮ ಎದುರಿಗಿದೆ. ನಮ್ಮ ಹಿಂದೆ ನಾವು ಉಚಿತವಾಗಿ ಬಳಸಿದ ಪರಿಣಾಮವಾಗಿ ದೊರೆತ ದತ್ತಾಂಶಗಳೇ ಎಐನ ಜೀವಾಳವಾಗಿದೆ.  

ಪ್ರಸ್ತುತ ಯಾವ ಬಗೆಯ ಎಐ(AI) ಲಭ್ಯವಿದೆ? 

ಈ ಹಿಂದೆ ಗ್ರಾಹಕರಿಗೆ ಉಚಿತವಾಗಿ ತನ್ನ ಉತ್ಪನ್ನಗಳನ್ನು ಬಳಸಲು ಅವಕಾಶ ನೀಡಿರುವ ಹಲವಾರು ಕಂಪನಿಗಳು ಕೃತಕ ಬುದ್ದಿಮತ್ತೆಯ ಉತ್ಪನ್ನ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಅತ್ಯಂತ ಸರಳ ಕೆಲಸಗಳಿಂದ ಹಿಡಿದು, ಕ್ಲಿಷ್ಟಕರ ಕೆಲಸಗಳಿಗೂ ಸಹ ಎಐ ಉತ್ಪನ್ನ ತಯಾರಿಸಲಾಗಿದೆ. 

ಚಾಟ್ ಜಿಪಿಟಿ (Chat-GPT): ನಿಮ್ಮ ಪ್ರಶ್ನೆಗಳಿಗೆಲ್ಲ ಉತ್ತರ ನೀಡುತ್ತದೆ. ಬೇಕೆಂದರೆ ಕಥೆ ಬರೆಯುತ್ತದೆ. ಪುಸ್ತಕ ಬರೆ ಅಂದರೆ ಪುಸ್ತಕವನ್ನು ಬರೆದು ಕೈಗಿಡುತ್ತದೆ. ಇಷ್ಟಲ್ಲದೇ, ಅತ್ಯಂತ ವೇಗವಾಗಿ ಹೊಸ ವೈಶಿಷ್ಠ್ಯಗಳನ್ನು ಹೊಂದಿರುವ ಹೊಸ ಅವತರಣಿಕೆ ಅತ್ಯಂತ ಕಡಿಮೆ ಅವಧಿಯಲ್ಲಿ ಬಿಡುಗಡೆಯಾಗುತ್ತಲೇ ಇದೆ.  

ಸೌಂಡ್ ರಾ (Soundraw): ಕೃತಕ ಸಂಗೀತ ಸೃಷ್ಠಿಸುವ ಎಐ ಇದು. ನಿಮಗೆ ಯಾವ ಬಗೆಯ ಸಂಗೀತ ಬೇಕು ಎಂಬ ಸಣ್ಣ ವಿವರಣೆ ನೀಡಿದರೆ ಸಾಕು, ಅದಕ್ಕೆ ತಕ್ಕಂತೆ ಸಂಗೀತ ತಯಾರಿಸಿ ನೀಡುತ್ತದೆ. ತಮ್ಮದೇ ಸ್ವಂತ ಯುಟ್ಯೂಬ್ ಚಾನೆಲ್ ಹೊಂದಿರೋರಿಗೆ ತಮ್ಮ ವಿಡಿಯೋಗಳಿಗೆ ಸಂಗೀತ ಹೊಂದಿಸುವುದು ಒಂದು ಸವಾಲೇ ಸರಿ. ಅದಕ್ಕೆಂದೇ ಯಾವುದೇ ಕಾಪಿ ರೈಟ್ ಇರದ ಸಂಗೀತ ಸೃಷ್ಟಿಸಿ ನೀಡುತ್ತದೆ. 

ರೆಬೆಕ್ಎಐ (RebeccAi): ನಿಮ್ಮ ತಲೆಯಲ್ಲಿರುವ ಬಿಜಿನೆಸ್ ಐಡಿಯಾಗೆ ನೀಲಿನಕ್ಷೆ ನೀಡಿ ಸಹಾಯ ಮಾಡುತ್ತದೆ. ಹೌದು. ನಿಮಗೆ ಅಡುಗೆಯಲ್ಲಿ ಆಸಕ್ತಿ ಇದ್ದು ಹತ್ತು ಸಾವಿರ ಒಳಗಿನ ಒಂದು ಲಾಭದಾಯಕ ಬಿಜಿನೆಸ್ ತಯಾರಿಸಿ ಕೊಡು ಎಂದರೆ ಸಾಕು, ನಿಮ್ಮ ಬಜೆಟ್ಟಿಗೆ ತಕ್ಕಂತೆ ಯೋಜನೆ ಸಿದ್ಧಪಡಿಸಿಕೊಡುತ್ತದೆ. 

ಯು ಗಾಟ್ ಕುಕ್ಕಿಂಗ್ (You got cooking): ಅಡುಗೆ ಮನೆಗೆ ಹೋದಾಕ್ಷಣ, ಯಾವ ಅಡುಗೆ ಮಾಡಬೇಕು ಅನ್ನೋ ದೊಡ್ಡ ಪ್ರಶ್ನೆ ಯಾವಾಗ್ಲೂ ನಿಮ್ಮ ತಲೆಯಲ್ಲಿ ಮೂಡತ್ತಾ? ಅಡುಗೆ ಮನೇಲಿ ಏನೇನು ಇದೆ ಅಂತ ಹೇಳಿದ್ರೆ ಯು ಗಾಟ್ ಕುಕ್ಕಿಂಗ್ ಎಂಬ ಎಐ ನೀವು ಯಾವೆಲ್ಲ ಅಡುಗೆ ತಯಾರಿಸಬಹುದು ಅಂತ ದೊಡ್ಡ ಪಟ್ಟಿಯನ್ನೇ ನೀಡತ್ತೆ. ಅದರಲ್ಲೊಂದು ಆಯ್ಕೆ ಮಾಡಿ ಅಡುಗೆ ಮಾಡಿದರಾಯ್ತು.  

ಕ್ವಿಲ್ ಬಾಟ್ (Quillbot): ಇಂಗ್ಲೀಷ್ ಬರೆದದ್ದನ್ನ ಯಾರಾದ್ರೂ ನೋಡಿ ಸರಿ ಮಾಡೋರಿದ್ರೆ ಒಳ್ಳೇದು ಅಂತ ಅನ್ಸತ್ತಾ, ಅಂಥವರಿಗಾಗಿಯೇ ಕ್ವಿಲ್ ಬಾಟ್ ಅನ್ನೋ ಎಐ ಇದೆ. ಬರೆದಿರೋ ಇಂಗ್ಲೀಷನ್ನ ನೋಡಿ ಅದು ಸರಿ ಇದ್ಯಾ ಇಲ್ವಾ ಅಂತ ನೋಡಿ, ಅದಕ್ಕಿಂತ ಉತ್ತಮವಾಗಿರೋ ಇಂಗ್ಲೀಷ್ ಪದಗಳನ್ನ ಜೋಡಿಸಿ ಕ್ವಿಲ್ ಬಾಟ್ ನೀಡತ್ತೆ. 

ಸಿಂಪ್ಟಂ ಚೆಕ್ಕರ್ ಡಾಟ್ ಐಓ(symptomchecker.ai): ಪಾಶ್ಚಿಮಾತ್ಯ ದೇಶಗಳಲ್ಲಿ ವೈದ್ಯರ ಅಪಾಯಂಟ್ ಮೆಂಟ್ ಸುಲಭವಾಗಿ ಲಭ್ಯವಾಗುವುದಿಲ್ಲ. ಅದಕ್ಕೆಂದೇ ಸಿಂಪ್ಟಂ ಚೆಕ್ಕರ್ ಅನ್ನೋ ಎಐ ತಯಾರಿಸಲಾಗಿದೆ. ಇದರಲ್ಲಿ ನಿಮಗಿರುವ ಅನಾರೋಗ್ಯದ ಲಕ್ಷಣಗಳನ್ನು ನಮೂದಿಸಿದರೆ, ನಿಮಗಿರುವುದು ಗಂಭೀರ ಲಕ್ಷಣವೋ ಅಥವಾ ಸಾಮಾನ್ಯ ಲಕ್ಷಣಗಳೋ ಎಂಬುದನ್ನು ತಿಳಿಸಲಿದೆ. ಅದರ ಆಧಾರದ ಮೇಲೆ ವೈದ್ಯರ ಭೇಟಿಯ ಬಗ್ಗೆ ಗಂಭೀರವಾಗಿ ಯೋಚನೆ ಮಾಡಬಹುದಾಗಿದೆ.  

ಮೇಲೆ ಹೇಳಿರೋ ಎಐಗಳು ಒಂದಿಷ್ಟು ಉದಾಹರಣೆಗಳಷ್ಟೇ. ಇಂಥಹ ಬಗೆ ಬಗೆಯ ಕೃತಕ ಬುದ್ದಿಮತ್ತೆ ಹೊಂದಿರೋ ಉತ್ಪನ್ನಗಳು ಪ್ರತಿ ಕ್ಷೇತ್ರದಲ್ಲೂ ಮಾರುಕಟ್ಟೆಗೆ ಲಗ್ಗೆ ಇಡ್ತಾ ಇವೆ. ಪ್ರಸ್ತುತ ಎಐ ಕ್ರಾಂತಿ ಆರಂಭವಾಗಿದೆ. ಒಂದು ಕಂಪನಿ ಈಗತಾನೇ ಬಿಡುಗಡೆಯಾಗಿರೋ ಎಐ ವೈಶಿಷ್ಟ್ಯವನ್ನು ಅರಿತು, ಬಳಸಲು ಶುರು ಮಾಡುವಷ್ಟರಲ್ಲಿ, ಇನ್ನೊಂದು ಕಂಪನಿ ಹೊಸ ಚಮತ್ಕಾರದೊಂದಿಗೆ ಹೊಸ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತದೆ. 

ಎಐ(AI) ಸಾಧಕಗಳೇನು?

ಈ ಹೊಸ ಎಐ ತಂತ್ರಾಂಶಗಳು ಕಂಪನಿಗಳಿಗಂತೂ ಖುಷಿ ಕೊಟ್ಟಿದೆ. ಇದುವರೆಗೂ ಪರ್ಫೆಕ್ಟ್ ಅಥವಾ ಪರಿಪೂರ್ಣ ಅನ್ನುವಂಥಹ ಕೃತಕ ಬುದ್ದಿಮತ್ತೆ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಇಲ್ಲವಾದರೂ, ಪ್ರಸ್ತುತ ಇರುವ ಸಣ್ಣ ಪುಟ್ಟ ದೋಷಗಳು ದಿನ ಕಳೆದಂತೆ ಕಡಿಮೆಯಾಗಲಿದೆ. ಮತ್ತು ಕಂಪನಿಗಳು ಎಐ ನೆಚ್ಚಿಕೊಳ್ಳಬಹುದು ಎಂಬ ಆಸೆಯಲ್ಲಿರುವುದಂತೂ ನಿಜ. 

  • ಸರಳಗೊಳ್ಳುವ ಕೆಲಸಗಳು: ಕೋಡಿಂಗ್, ಗ್ರಾಫಿಕ್ ಡಿಸೈನಿಂಗ್, ವೆಬ್ಸೈಟ್ ಡಿಸೈನಿಂಗ್ ಸೇರಿದಂತೆ ಅನೇಕ ಕೆಲಸಗಳು ಸುಲಭವಾಗಿ ನಿರ್ವಹಿಸಬಹುದಾಗಿದೆ. ಕೆಲಸದ ಬಗ್ಗೆ ಮಾಹಿತಿ ಇಲ್ಲದೇ ಹೋದರೂ, ಸರಿಯಾದ ಸೂಚನೆ ಅಥವಾ ವಿವರಣೆ ನೀಡಿದಲ್ಲಿ ಬೇಕಾದ ಕೆಲಸವನ್ನು ಮಾಡಿಸಿಕೊಳ್ಳಬಹುದಾಗಿದೆ. 
  • ಸಮಯದ ಉಳಿತಾಯ: ಕೆಲವೊಂದು ಕೆಲಸಗಳು ತಜ್ಞರೇ ಕುಳಿತು ಮಾಡಿದರೂ, ದಿನಗಟ್ಟಲೆ ತೆಗೆದುಕೊಳ್ಳುತ್ತಾರೆ. ಆದರೆ ಕೃತಕ ಬುದ್ದಿಮತ್ತೆ ಹೊಂದಿದ ತಂತ್ರಾಂಶಗಳು ಕ್ಷಣಾರ್ಧದಲ್ಲಿ ಮಾಡಿ ಮುಗಿಸುತ್ತವೆ. ಇದರಿಂದ ಕಾರ್ಯ ದಕ್ಷತೆ ಹೆಚ್ಚಲಿದೆ. 
  • ಕಡಿಮೆ ವೆಚ್ಚ: ಯಾವುದೇ ಉದ್ಯೋಗಕ್ಕೂ ಸೂಕ್ತ ಅಭ್ಯರ್ಥಿಯನ್ನು ಆಯ್ದುಕೊಂಡು ಕೆಲಸ ನೀಡುವುದು ಸುಲಭವಲ್ಲ. ಆದರೆ, ಎಐ ತಂತ್ರಾಂಶಗಳು ಒರ್ವ ಉದ್ಯೋಗಿಗಿಂತ ಕಡಿಮೆ ದರದಲ್ಲಿ ಕೆಲಸ ಮಾಡಿ ಮುಗಿಸುತ್ತದೆ.  
  • ಸಾಮಾನ್ಯರಿಗೂ ಬಳಕೆಗೆ ಅವಕಾಶ: ಕೆಲವೊಂದು ಅವಕಾಶಗಳು ಸಾಮಾನ್ಯರಿಗೆ ಕೈಗೆಟುಕದಂತಿರುತ್ತದೆ. ಆದರೆ, ಎಐ ಕಾಲಿಟ್ಟ ಬಳಿಕ ಸಾಮಾನ್ಯರಲ್ಲಿ ಸಾಮಾನ್ಯರೂ ಕೂಡ ಉತ್ತಮ ತಂತ್ರಾಂಶಗಳನ್ನು ಬಳಸಿಕೊಳ್ಳಲು ಹೊಸ ಬಾಗಿಲು ತೆರೆದುಕೊಂಡಿದೆ. 

ಸಣ್ಣ ಸಣ್ಣ ಉದ್ಯಮದಾರರಿಗೆ ಎಐ ನಿಜಕ್ಕೂ ವರದಾನ. ದುಡ್ಡುಕೊಟ್ಟು ಉದ್ಯೋಗಿಗಳನ್ನಿಟ್ಟುಕೊಂಡು ಮಾಡಿಸಿಕೊಳ್ಳಬೇಕಾದ ಕೆಲಸಗಳನ್ನೆಲ್ಲ ಎಐ ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಮಾಡಿ ತೋರಿಸಲಿದೆ. ಹಾಗಾಗಿ ಅವಶ್ಯಕತೆ ಬಿದ್ದಲ್ಲೆಲ್ಲ ಎಐ ಅನ್ನು ಬಳಸಿಕೊಳ್ಳಬಹುದು. 

ಇಷ್ಟೆಲ್ಲ ಉತ್ತಮ ಅಂಶಗಳು ಕಂಡುಬಂದಿರುವಾಗ ಎಐ ಅದ್ಭುತ ಎಂದು ಅನಿಸದೇ ಇರದು. ಆದರೆ ಇದರಲ್ಲೂ ಹಲವು ಬಾಧಕಗಳಿವೆ. 

ಎಐ(AI) ದುಷ್ಪರಿಣಾಮಗಳೇನು ?

  • ಸೃಜನಶೀಲತೆಗೆ ಕುತ್ತು: ಗ್ರಾಹಕರಿಗೆ ಉತ್ತರ ನೀಡುವುದಾಗಲಿ, ಇನ್ನಾವುದೇ ಸಂವಹನ ನಡೆಸುವುದಾಗಲಿ ಎಲ್ಲವೂ ಯಾಂತ್ರಿಕಗೊಳ್ಳುತ್ತದೆ.  ಸೃಜನಶೀಲತೆ ಎಂಬುದೇ ಇರುವುದಿಲ್ಲ
  • ಕೆಟ್ಟ ಉದ್ದೇಶಕ್ಕೆ ಬಳಕೆ: ಬಹುತೇಕ ತಂತ್ರಾಂಶಗಳು ಉಚಿತವಾಗಿರುವುದರಿಂದ ಸುಲಭವಾಗಿ ಮೋಸದ ಜಾಲಗಳಿಗೆ ಬಳಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ. ಕೆಟ್ಟ ಉದ್ದೇಶಕ್ಕೆ ಬಳಸಿಕೊಳ್ಳುವುದುನ್ನು ತಡೆಗಟ್ಟುವುದು ಕಷ್ಟಸಾಧ್ಯ. 
  • ನಿಯಮಗಳೇ ಇಲ್ಲ: ಈಗಾಗಲೇ ಸೈಬರ್ ಕ್ರೈಂ ಹೆಚ್ಚುತ್ತಿವೆ. ಸೈಬರ್ ಅಪರಾಧವನ್ನು ಕಡಿವಾಣ ಹಾಕಲೂ ಇಂದಿಗೂ ನಮ್ಮಲ್ಲಿ ಸೂಕ್ತ ವ್ಯವಸ್ಥೆಯೇ ಇಲ್ಲ. ಇದೀಗ ಕೃತಕ ಬುದ್ದಿಮತ್ತೆ ಬಳಸಿಕೊಂಡು ಅಪರಾಧಗಳು ಹೆಚ್ಚಿದರೆ, ಅದನ್ನು ನಿಭಾಯಿಸುವ ಚಾಕಚಕ್ಯತೆ ಅಷ್ಟು ಸುಲಭದಲ್ಲಿಲ್ಲ. ಮತ್ತು ಅವುಗಳನ್ನು ಕಡಿವಾಣ ಹಾಕಲೂ ನಮ್ಮಲ್ಲಿ ಯಾವುದೇ ಕಠಿಣ ಕಾನೂನುಗಳು ಇಲ್ಲ. ಇದರಿಂದ ಅಪರಾಧಕ್ಕೆ ಇನ್ನಷ್ಟು ಪ್ರೇರಣೆ ನೀಡಿದಂತಾಗುತ್ತದೆ. 
  • ಜವಾಬ್ಧಾರಿಯುತ ನಡಿಗೆ ಕಡಿಮೆ: ನಮ್ಮಲ್ಲಿ ಯಾವುದೇ ಒಂದು ವಸ್ತು ಉಚಿತ ಮತ್ತು ಸುಲಭವಾಗಿ ದೊರಕಿದರೆ ಅದನ್ನು ದುರ್ಬಳಕೆ ಮಾಡಿಕೊಳ್ಳುವುವರೇ ಹೆಚ್ಚು. ಇಂಥಹ ತಂತ್ರಾಂಶಗಳು ಕೈಗೆ ಸಿಕ್ಕಾಗ, ಯಾವ ಹಂತದಲ್ಲಿ ಇಂಥಹ ಎಐ ಬಳಕೆ ಕಡಿಮೆ ಮಾಡಬೇಕು ಎಂಬ ಮನೋಸ್ಥಿತಿಯೂ ಅವಶ್ಯಕವಾಗಿ ಬೇಕಾಗುತ್ತದೆ. ಆದರೆ, ಬಳಕೆದಾರರಲ್ಲಿ ಇಂಥಹ ಜವಾಬ್ಧಾರಿಯುತ ಹೆಜ್ಜೆ ಕಾಣುವುದು ಅತ್ಯಂತ ವಿರಳ. 

ಇದಿಷ್ಟೇ ಸಮಸ್ಯೆಗಳಲ್ಲ. ಇನ್ನು ಆಯಾ ಕ್ಷೇತ್ರಕ್ಕೆ ತಕ್ಕಂತೆ ಸಮಸ್ಯೆಗಳು ವಿಭಿನ್ನವಾಗಿ ಗೋಚರಿಸುತ್ತವೆ.  ಕೃತಕ ಬುದ್ದಿಮತ್ತೆ ಎಲ್ಲೆಡೆ ಕಾಲಿಟ್ಟಿರುವಾಗ ತಂತ್ರಾಂಶವನ್ನೇ ನಂಬಿ ಕೆಲಸ ಸೇರಿರುವ ಉದ್ಯೋಗಿಗಳ ಪಾಡೇನು ಎಂಬ ಪ್ರಶ್ನೆ ಮೂಡುವುದು ಸಹಜ.

ಎಐನಿಂದ ನಿಜಕ್ಕೂ ಕೆಲಸಕ್ಕೆ ಕುತ್ತು ಬಂದಿದೆಯೇ?

ಎಐ ಕಾಲಿಟ್ಟಾಗಿನಿಂದ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುತ್ತಿರುವ ಸುದ್ದಿಯೂ ಅಲ್ಲಲ್ಲಿ ಕಿವಿ ಮುಟ್ಟತೊಡಗಿದೆ. ಕೃತಕ ಬುದ್ದಿಮತ್ತೆಯ ಅಭಿವೃದ್ಧಿಯ ನಾಗಾಲೋಟ ನೋಡಿದರೆ, ಇನ್ನು ಕೆಲವೇ ವರ್ಷಗಳಲ್ಲಿ ಮಾನವ ನಿರ್ಮಿತ ಕಾರ್ಯಕ್ಕಿಂತ ಅಧಿಕ ದಕ್ಷತೆಯಿಂದ ಕೆಲಸ ಮಾಡುವುದಂತೂ ನಿಶ್ಚಿತ. ಅತ್ಯಂತ ಕಡಿಮೆ ವೆಚ್ಚದಲ್ಲಿ ಕಂಪನಿಯ ಕೆಲಸಗಳು ಸಾಗತೊಡಗುತ್ತದೆ. ಈ ತಂತ್ರಾಂಶಗಳಿಗೆ ಹೆಚ್ಚೆಚ್ಚು ಸಮಯ ಕೂಡ ಬೇಕಿಲ್ಲ. ಹಾಗಾಗಿ ದೊಡ್ಡ ಕಂಪನಿಗಳು ಒಂದು ಹಂತದಲ್ಲಿ ಎಐನತ್ತ ಮುಖ ಮಾಡಿರುವುದಂತೂ ಸುಳ್ಳಲ್ಲ. 

ಹಾಗಾದರೇ ಕೆಲಸ ಕಳೆದುಕೊಳ್ಳುವುದು ನಿಶ್ಚಿತವೇ?

ಪತ್ರ ಬರೆಯುತ್ತಿದ್ದ ಜನ ಸ್ಥಿರ ದೂರವಾಣಿ ಬಳಸತೊಡಗಿದರು. ಸ್ಥಿರ ದೂರವಾಣಿ ಬಳಸುತ್ತಿದ್ದವರು ಪ್ರಸ್ತುತ ಮೊಬೈಲ್ ಮೋಹಕ್ಕೆ ಬಿದ್ದಿದ್ದಾರೆ. ಹಿಂದೆ ಮಾಡುತ್ತಿದ್ದ ಕೆಲಸಗಳೆಲ್ಲ ಬದಲಾವಣೆ ಕಂಡುಕೊಳ್ಳುತ್ತ, ಹೊಸ ರೂಪ ಪಡೆಯುತ್ತ ಬಂದಿದೆ. ಅದೇ ರೀತಿಯಲ್ಲಿ ತಂತ್ರಜ್ಞಾನವೂ ಕೂಡ ಬದಲಾವಣೆಯನ್ನು ಕಂಡುಕೊಳ್ಳತೊಡಗಿದೆ. ಇಂದು ಇರುವ ಕೆಲಸ ನಾಳೆ ಇರುವುದಿಲ್ಲ. ಆದರೆ ನಾಳೆ ಹೊಸ ಕೆಲಸಗಳು ಸೃಷ್ಠಿಯಾಗುತ್ತಲೇ ಇರುತ್ತದೆ. ಇಂದು ಇದ್ದ ಕೆಲಸದ ರೂಪ ಬದಲಾಗಿ ನಾಳೆ ಹೊಸ ಕೆಲಸ ಹುಟ್ಟಿಕೊಳ್ಳುತ್ತವೆ. 

ಹಾಗಿದ್ದರೆ ನೀವು ಮಾಡಬೇಕಿರುವುದು ಏನು?

ಈ ಹಿಂದೆ ರೆಫ್ರಿಜರೇಟರ್ ಅನ್ನು ಮೊದಲ ಬಾರಿಗೆ ಕಂಡು ಹಿಡಿದಾಗ ಪ್ರತಿಷ್ಠಿತ ಕಂಪನಿಗಳೆಲ್ಲ ಅದನ್ನು ತಯಾರಿಸಲು ಮುಗಿಬಿದ್ದರಂತೆ. ಅದನ್ನು ತಯಾರು ಮಾಡಿ ಮಾರಿದರೆ, ಹಣವನ್ನು ಮೊಗೆದು ತಿಜೋರಿ ತುಂಬಿಸಬಹುದು ಎಂದು ಹಲವು ಕಂಪನಿಗಳು ರೆಫ್ರಿಜರೇಟರ್ ಉತ್ಪನ್ನಕ್ಕೆ ಕೈ ಹಾಕಿದರಂತೆ. ಆದರೆ ಬುದ್ದಿವಂತ ಕೆಲವೇ ಕೆಲವು ಕಂಪನಿಗಳು ಮಾತ್ರ ರೆಫ್ರಿಜರೇಟರ್ ಉತ್ಪನ್ನಕ್ಕೆ ಕೈ ಹಾಕದೇ ಅವುಗಳನ್ನು  ಬಳಸಿಕೊಂಡು ಉದ್ಯಮವನ್ನು ಆರಂಭಿಸಿದರಂತೆ. ಹಾಗೇ ಯಶಸ್ಸನ್ನು ಗಳಿಸಿದರಂತೆ. ಆ ಕಂಪನಿಗಳು ಯಾವವು ಗೊತ್ತೇ? ಕೋಲ ಮತ್ತು ಪೆಪ್ಸಿ ಕಂಪನಿಗಳು.  

ಈಗಲೂ ಹಾಗೇ, ಎಐ ಬಂತೆಂದು ತಲೆ ಮೇಲೆ ಕೈ ಇಟ್ಟು ಕೂರುವ ಪರಿಸ್ಥಿತಿ ಅಂತೂ ಬಂದಿಲ್ಲ. ನೀವು ಯಾವುದೇ ಕ್ಷೇತ್ರದಲ್ಲಿರಲಿ, ನಿಮ್ಮ ಕ್ಷೇತ್ರದ ಬಗ್ಗೆ ಅಪಾರವಾದ ಜ್ಞಾನ ಹೊಂದಲು ಪ್ರಯತ್ನಿಸಿ. ನಿಮ್ಮ ಕ್ಷೇತ್ರದಲ್ಲಿ ಲಗ್ಗೆ ಇಡುತ್ತಿರುವ ಎಐಗಳ ಮೇಲೆ ನಿಗಾ ಇರಲಿ. ಈ ಎಐ ಉತ್ಪನ್ನಗಳನ್ನು ನಿಮ್ಮ ಕೆಲಸದಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು ಎಂದು ತಿಳಿಯಿರಿ. ಎಐ ಬಳಿಸಿಕೊಂಡು ನಿಮ್ಮ ಕೆಲಸ ಸುಲಭವಾಗಿಸಿಕೊಂಡು ಹೇಗೆ ಲಾಭ ಪಡೆಯಬಹುದು ಎಂಬುದರ ಬಗ್ಗೆ ಪ್ರಾಯೋಗಿಕ ಜ್ಞಾನ ಪಡೆಯಿರಿ. ಉದಾಹರಣೆಗೆ ಪ್ರಾಮ್ಟ್ ಎಂಜಿನಿಯರಿಂಗ್ (prompt engineering) ಅನ್ನು ಕಲಿಯಿರಿ. ಕಲಿತರಷ್ಟೇ ಸಾಲದು, ಅದರನ್ನು ದಿನನಿತ್ಯವೂ ಉಪಯೋಗಿಸುತ್ತಿರಿ. ನೆನಪಿಡಿ, ಎಐಗಳಿಗೆ ಯಾವ ಕೆಲಸ, ಎಷ್ಟು ಸಮಯದಲ್ಲಿ, ಏನೇನು ಬಳಸಿಕೊಂಡು, ಹೇಗೆ ಮಾಡಬೇಕು ಎಂಬುದನ್ನು ಆದೇಶ ನೀಡಲಾದರೂ ಒಬ್ಬ ವ್ಯಕ್ತಿ ಬೇಕೇ ಬೇಕು. ಎಐ ಸಿದ್ದಗೊಳಿಸಿರುವುದು ಸರಿಯಾಗಿದೆಯೇ ಅಥವಾ ಬೇರೆ ರೀತಿಯಲ್ಲಿ ಆದೇಶ ನೀಡಬೇಕೆ ಎಂದು ನಿರ್ಧರಿಸಲಾದರೂ ಜನ ಬೇಕೆ ಬೇಕು. ಈ ಮೂಲಕ ಇರುವ ಕೆಲಸ ಸುಲಭಗೊಂಡು, ಹೊಸ ಕೆಲಸ ಸೃಷ್ಠಿಯಾಗುತ್ತದೆ. ಹೀಗೆ ಹೊಸ ಕೆಲಸ ಸೃಷ್ಠಿಯಾದಾಗ, ನೀವು ಅಗತ್ಯ ಜ್ಞಾನ ಹೊತ್ತು ನಿಂತಾಗ, ಅವಕಾಶ ಹುಡುಕಿಕೊಂಡು ಬರುತ್ತದೆ.     

ಕೊನೆಯ ಸಾಲು – ಬದಲಾವಣೆ ಜಗದ ನಿಯಮ. ನಮಗೆ ಇಷ್ಟವೋ, ಕಷ್ಟವೋ. ಹೊಸ ಹೊಸ ಆವಿಷ್ಕಾರಗಳು ಕಾಲಿಡುತ್ತಲೇ ಇರುತ್ತವೆ. ಕೃತಕ ಬುದ್ದಿಮತ್ತೆಯ ಉತ್ಪನ್ನಗಳು ತಮ್ಮ ಚಮತ್ಕಾರ ತೋರಿಸುತ್ತಿರುವುದು ಇದೇ ಮೊದಲೂ ಇಲ್ಲ. ಕೊನೆಯದಂತೂ ಅಲ್ಲವೇ ಅಲ್ಲ. ದಿನಗಳೆದಂತೆ ಹೊಸ ಹೊಸ ಆವಿಷ್ಕಾರಗಳು ಜಗತ್ತಿಗೆ ಕಾಲಿಡುತ್ತಲೇ ಇರುತ್ತವೆ. ಗ್ರಾಹಕರಾಗಿ ನಾವು ಜವಾಬ್ಧಾರಿಯುತವಾಗಿ ಬಳಸಿದರೆ, ಅವುಗಳಿಂದಾಗುವ ಅನಾಹುತದಿಂದ ಬಚಾವಾಗಬಹುದಷ್ಟೇ. ಉದ್ಯೋಗಿಗಳು ಹೊಸತನಕ್ಕೆ ಅಂಜದೇ ಅದರ ಒಳಗಿನ ಮರ್ಮ ಅರಿತುಕೊಂಡರೆ ಎಲ್ಲಾ ಕಾಲದಲ್ಲೂ ಗೆಲ್ಲುವ ಕುದುರೆಯಾಗಿ ಹೊರಹೊಮ್ಮಬಹುದು.    

ಚೈತ್ರ ಎಲ್ ಹೆಗಡೆ

Read Previous

ಜ್ಞಾನೋದಯ – Jnanodaya

Read Next

ಡೀಪ್‌ಫೇಕ್ ತಂತ್ರಜ್ಞಾನ – ಏನಿದರ ಮರ್ಮ?

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Most Popular